ಕರಾವಳಿ ಪ್ರಮುಖ 3 ಸುದ್ದಿಗಳು
ದಕ್ಷಿಣ ಕನ್ನಡ ಎಸ್ಪಿ ರಿಷ್ಯಂತ್ ವರ್ಗಾವಣೆ
– ಬೆಂಗಳೂರಿನ ವೈರ್ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆ
– ಕೆಎಸ್ಆರ್ಪಿ ಕಮಾಂಡೆಂಟ್ ಕೃಷ್ಣಪ್ಪ ದೋಷಮುಕ್ತ
– ಮಂಗಳೂರಿನ ಎಂಸಿಸಿ ಬ್ಯಾಂಕ್ನಿಂದ ಐವನ್ ಡಿಸೋಜ ಸೇರಿ ಮೂವರಿಗೆ ಸನ್ಮಾನ
NAMMUR EXPRESS NEWS
ಮಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ಸರ್ಕಾರವು ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದಾರೆ.
ದಕ್ಷಿಣ ಕನ್ನಡದ ಎಸ್ಪಿಯಾಗಿದ್ದ ರಿಷ್ಯಂತ್ ಅವರನ್ನು ಬೆಂಗಳೂರಿನ ವೈರ್ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ರಿಷ್ಯಂತ್ ಅವರ ಜಾಗಕ್ಕೆ ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಯತೀಶ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಬಿ ರಿಷ್ಯಂತ್ ಅವರು 2013ರ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡವರು. ಇನ್ನು ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದ ವಿಚಾರವಾಗಿ ಹಾಗೂ ನಂತರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಅವರ ಬೆಂಬಲಿಗರ ಬಂಧನವಾದಾಗ ಪೂಂಜಾ ಅವರು ರಿಷ್ಯಂತ್ ವಿರುದ್ಧ ತೀವ್ರ ವಾಗ್ಧಾಳಿ ಕೂಡ ನಡೆಸಿದ್ದರು.
ಕೆಎಸ್ಆರ್ಪಿ ಕಮಾಂಡೆಂಟ್ ಕೃಷ್ಣಪ್ಪ ದೋಷಮುಕ್ತ
ಮಂಗಳೂರಿನ 7ನೇ ಕೆ.ಎಸ್.ಆರ್.ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕಮಾಂಡೆಂಟ್ ಕೃಷ್ಣಪ್ಪ ಅವರನ್ನು ಅಕ್ರಮ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್ ತೀರ್ಪು ನೀಡಿದ್ದಾರೆ.
1991 ಬ್ಯಾಚ್ ನ ಅಧಿಕಾರಿಯಾಗಿದ್ದ ಕೃಷ್ಣಪ್ಪ ನವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸುಮಾರು 87 ಲಕ್ಷ ರೂ. ಅಕ್ರಮ ಆಸ್ತಿ ಪಾಸ್ತಿ ಹೊಂದಿರುವುದಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪ್ರಸನ್ನ ವಿ.ರಾಜ್ ತನಿಖೆ ನಡೆಸಿದ್ದು, ಡಾ.ಪ್ರಭುದೇವ ಮಾನೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಕೃಷ್ಣಪ್ಪ ಮೂಲತಃ ಹಾವೇರಿ ಜಿಲ್ಲೆಯ ಖಂಡೇರಾಯನ ಹಳ್ಳಿಯವರಾಗಿದ್ದು, ಖಂಡೇರಾಯನ ಹಳ್ಳಿ ಮತ್ತು ದಾವಣಗೆರೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದು ಮತ್ತು ಕೆ.ಎಸ್.ಆರ್.ಪಿ ಅಧಿಕಾರಿಯಾಗುವ ಪೂರ್ವದಲ್ಲಿ ಕೇಂದ್ರ ಸರಕಾರದ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜತೆಗೆ ಕೃಷ್ಣಪ್ಪನವರ ಪತ್ನಿಗೆ ಮದುವೆ ಸಂದರ್ಭದಲ್ಲಿ ತವರು ಮನೆಯವರು ಚಿನ್ನ, ಬೆಳ್ಳಿ ಅಲ್ಲದೆ ಸ್ಥಿರಾಸ್ಥಿಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು. ಈ ಎಲ್ಲ ವಿಚಾರಗಳನ್ನು ಕೃಷ್ಣಪ್ಪನವರು ಪ್ರತಿವರ್ಷ ಸರಕಾರಕ್ಕೆ ಸಲ್ಲಿಸುವ ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲ ಆದಾಯದ ಮೂಲವನ್ನು ಪರಿಶೀಲಿಸದೆ ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಜತೆಗೆ ಕೆ.ಪಿ.ಎಸ್ ಅಧಿಕಾರಿಯಾಗಿದ್ದ ಕೃಷ್ಣಪ್ಪ ಐ.ಪಿ.ಎಸ್ ಅಧಿಕಾರಿಯಾಗಿ ಪದೋನ್ನತಿ ಗೊಳ್ಳುವುದನ್ನು ತಪ್ಪಿಸುವ ದುರುದ್ದೇಶದಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೃಷ್ಣಪ್ಪ ನವರ ಪರ ನ್ಯಾಯವಾದಿ ಪಿ.ಪಿ ಹೆಗ್ಡೆ ಅಸೋಸಿಯೇಟ್ಸ್ ನ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದರು. ಇದೀಗ ಕೋರ್ಟ್ ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಮಂಗಳೂರಿನ ಎಂಸಿಸಿ ಬ್ಯಾಂಕ್ನಿಂದ ಐವನ್ ಡಿಸೋಜ ಸೇರಿ ಮೂವರಿಗೆ ಸನ್ಮಾನ
ವಿಧಾನ ಪರಿಷತ್ ನೂತನ ಶಾಸಕ ಐವನ್ ಡಿಸೋಜ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯುಎಚ್ ಅವರನ್ನು ಮಂಗಳೂರಿನ ಎಂಸಿಸಿ ಬ್ಯಾಂಕ್ ವತಿಯಿಂದ ನಗರದ ಯೆಯ್ಯಾಡಿಯಲ್ಲಿ ಸನ್ಮಾನಿಸಲಾಯಿತು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರು. ಮಾಜಿ ಶಾಸಕ ಜೆಆರ್ ಲೋಬೊ ಅವರು ಅಭಿನಂದನಾ ಭಾಷಣ ಮಾಡಿದರು. ಬ್ಯಾಂಕ್ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಬ್ಯಾಂಕ್ನ ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಐರಿನ್ ರೆಬೆಲ್ಲೊ ಸನ್ಮಾನಿತರನ್ನು ಪರಿಚಯಿಸಿದರು.
ನಿರ್ದೇಶಕರಾದ ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ಟೊ, ಜೆಪಿ ರೊಡ್ರಿಗಸ್, ರೋಶನ್ ಡಿಸೋಜ, ಫ್ರೀಡಾ, ಮೆಲ್ವಿನ್ ವಾಸ್, ಹೆರಾಲ್ಡ್ ಮೊಂತೇರೊ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್, ರಾಜ್ ಮಿನೇಜಸ್ ಉಪಸ್ಥಿತರಿದ್ದರು.