ಗಂಡನ ಕೊಂದ ಹೆಂಡತಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ!
– ಮಂಗಳೂರಿನಲ್ಲಿ ಪತಿಯ ಕೊಲೆಗೈದ ಪ್ರಕರಣ: ಕೋರ್ಟ್ ಶಿಕ್ಷೆ
– ಟಿಪ್ಪರ್ ಡಿಕ್ಕಿ: ಪಾವೂರು ನಿವಾಸಿ ಚಿಕಿತ್ಸೆ ಫಲಿಸದೆ ಸಾವು
NAMMUR EXPRESS NEWS
ಮಂಗಳೂರು: ಪತಿಯ ಕೊಲೆಗೆ ಸುಪಾರಿ ನೀಡಿದ್ದ ಆರೋಪ ಎದುರಿಸುತ್ತಿದ್ದ ಪತ್ನಿ ಸಹಿತ 5 ಮಂದಿ ಆರೋಪಿಗಳಿಗೆ ಮಂಗಳೂರಿನ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪಾವೂರು ಗ್ರಾಮದ ಇನೋಳಿಯ ನೆಬಿಸಾ(40), ಬಿಸಿರೋಡ್ನ ಅಬ್ದುಲ್ ಮುನಾಫ್ ಯಾನೆ ಮುನ್ನ(41), ಉಳ್ಳಾಲದ ಅಬ್ದುಲ್ ರಹಿಮಾನ್(36), ಬೋಳಿಯಾರಿನ ಶಬೀರ್ ಯಾನೆ ಶಬ್ಬಿ(31), ಕುತ್ತಾರ್ ಪದವಿನ ಜಮಾಲ್ ಅಹ್ಮದ್(38) ಶಿಕ್ಷೆಗೊಳಗಾದ ಆರೋಪಿಗಳು. ಪಾವೂರು ಗ್ರಾಮದ ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್(59)ಕೊಲೆಯಾದ ವ್ಯಕ್ತಿ.
ಘಟನೆ ವಿವರ:
ಇನೋಳಿಯ ಇಸ್ಮಾಯಿಲ್ಗೆ ನೆಬಿಸಾ ಜತೆ ಎರಡನೇ ಮದುವೆಯಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಪತ್ನಿ ನೆಬಿಸಾ ಕುತ್ತಾರ್ ಪದವಿನ ಜಮಾಲ್ ಅಹ್ಮದ್ ಜತೆ ಅನ್ಯೋನ್ಯವಾಗಿರುವುದನ್ನು ತಿಳಿದ ಇಸ್ಮಾಯಿಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ವಿಚಾರದಲ್ಲಿ ದಂಪತಿ ಮಧ್ಯೆ ಜಗಳವಾಗುತ್ತಿತ್ತು.ಈ ಮಧ್ಯೆ ಜಮಾಲ್ ಜತೆ ಸೇರಿಕೊಂಡು ನೆಬಿಸಾ ತನ್ನ ಪತಿ ಇಸ್ಮಾಯಿಲ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಅಬ್ದುಲ್ ರಹಿಮಾನ್ ಎಂಬಾತನ ಜತೆ ಸೇರಿ ದೇರಳಕಟ್ಟೆ ಗ್ರೀನ್ಲ್ಯಾಂಡ್ ಗ್ರೌಂಡ್ ಬಳಿ ಸಂಚು ರೂಪಿಸಿದ್ದರು ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದರು.
2016ರ ಫೆ.16ರಂದು ಆರೋಪಿ ಅಬ್ದುಲ್ ರಹಿಮಾನ್ ಬೆಂಗಳೂರಿಗೆ ಬಾಡಿಗೆಯಿದೆ ಎಂದು ಹೇಳಿ ಇಸ್ಮಾಯಿಲ್ನನ್ನು ನಂಬಿಸಿ ಫರಂಗಿಪೇಟೆಯಿಂದ ಕರೆದೊಯ್ದಿದ್ದ. ಬಳಿಕ ಬಿಸಿ. ರೋಡ್ ಬಳಿ ಆರೋಪಿಗಳಾದ ಮುನಾಫ್ ಮತ್ತು ಶಬೀರ್ರನ್ನು ಅದೇ ವಾಹನಕ್ಕೆ ಹತ್ತಿಸಿ ಶಿರಾಡಿಯತ್ತ ಕರೆದುಕೊಂಡು ಹೋಗಿದ್ದರು. ಬಳಿಕ ಕಾಡಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು. ಬಳಿಕ ಪತ್ನಿನೆಬಿಸಾ ತನ್ನ ಮೇಲೆ ಅನುಮಾನ ಬರದಂತೆ ಪತಿ ಕಾಣೆಯಾಗಿರುವುದಾಗಿ ದೂರು ಕೊಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜ ಎಸ್ವಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸಹಿತ 2 ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 2 ವರ್ಷ ಸಜೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಟಿಪ್ಪರ್ ಡಿಕ್ಕಿ: ಪಾವೂರು ನಿವಾಸಿ ಚಿಕಿತ್ಸೆ ಫಲಿಸದೆ ಸಾವು
ಮಂಗಳೂರು: ಸ್ಕೂಟರ್ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ ( 27) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗಣೇಶ್ ಅವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಣೇಶ್ ಅವರು ಜೂ.28ರಂದು ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ಸಂದರ್ಭ ಬೆಳಗ್ಗೆ ಸುಮಾರು 11 ಗಂಟೆಗೆ ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಈ ಅಪಘಾತ ಸಂಭವಿಸಿತ್ತು. ಟಿಪ್ಪರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಗಣೇಶ್ ಅವರು ಹಿಂದಿನಿಂದ ಘನ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ರಸ್ತೆಗೆ ಎಸೆಯಲ್ಪಟ್ಟ ರಭಸಕ್ಕೆ ಅವರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ತಕ್ಷಣ ಟಿಪ್ಪರ್ ಚಾಲಕ ಹಾಗೂ ಸ್ಥಳೀಯರು ಸೇರಿಕೊಂಡು ನಾಟೆಕಲ್ನ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಡ್ಯಾರ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಗಣೇಶ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನಲ್ಲಿ ಎ.ಸಿ. ಮೆಕ್ಯಾನಿಕ್ ಆಗಿದ್ದ ಗಣೇಶ್ ದೊಡ್ಡ ಮಗನಾಗಿ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ನಿರ್ಲಕ್ಷ್ಯದ ಚಾಲನೆಗಾಗಿ ಟಿಪ್ಪರ್ ಚಾಲಕ ಮಹಮ್ಮದ್ ಹನೀಫ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮೃತರು ತಾಯಿ, ತಂದೆ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತ ಗಣೇಶ್ ಆಚಾರ್ಯ ಅವರ ಶಸ್ತ್ರಚಿಕಿತ್ಸೆಗೆ 10ಲಕ್ಷರೂ. ಖರ್ಚು ಆಗಿರುವ ಕಾರಣ ಸ್ನೇಹಿತರು ವಾಟ್ಸಾಪ್ ಮೂಲಕ ದಾನಿಗಳ ಸಹಕಾರವನ್ನು ಕೋರಿದ್ದಾರೆ.