-ಸಹೋದರರಿಗೆ ಸಾಂತ್ವನ ಹೇಳಿದ ಕ್ರಿಕೆಟಿಗರು
-ಸಹೋದರರ ಕ್ರಿಕೆಟ್ ಏಳಿಗೆಗೆ ಅಪಾರವಾದ ಕೊಡುಗೆ
ವಡೋದರ: ಟೀಮ್ ಇಂಡಿಯಾದ ಆಲ್-ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರ ತಂದೆ ಹಿಮಾಂಶು (71 ವರ್ಷ) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. ಸಹೋದರರು ಕ್ರಿಕೆಟ್ ಬದುಕಿನಲ್ಲಿ ಕಂಡ ಏಳ್ಗೆಗೆ ಹಿಮಾಂಶು ಅಪಾರವಾದ ಕೊಡುಗೆಗಳನ್ನು ನೀಡಿದ್ದರು.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡ ತಂಡವನ್ನು ಮುನ್ನಡೆಸುತ್ತಿದ್ದ ಕೃನಾಲ್ ಪಾಂಡ್ಯ, ತಂದೆಯ ನಿಧನದ ಹಿನ್ನೆಲೆಯಲ್ಲಿ ಟೂರ್ನಿಯ ಬಯೋ-ಬಬಲ್ ತೊರೆದು ನಿರ್ಗಮಿಸಿದ್ದಾರೆ. ಈ ಟೂರ್ನಿಯಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಮುಂಬರುವ ಇಂಗ್ಲೆಂಡ್ ವಿರುದ್ಧದ ತವರಿನ ಸೀಮಿತ ಓವರ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದರು.
ಪಾಂಡ್ಯ ಸಹೋದರರ ಸಹ-ಆಟಗಾರರು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬರೋಡದವರೇ ಆದ ಮಾಜಿ ಆಲ್-ರೌಂಡರ್ ಗಳಾದ ಇರ್ಫಾನ್-ಯೂಸುಫ್ ಪಠಾಣ್ ಸಹೋದರರು, ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತಿತರರು ಪಾಂಡ್ಯ ಸಹೋದರರಿಗೆ ಸಾಂತ್ವಾನ ಹೇಳಿದ್ದಾರೆ.