ಕರಾವಳಿಯಲ್ಲಿ ಮಳೆ ಆರ್ಭಟ, ಅವಾಂತರ!
– ಹೆಬ್ರಿ: ಕಾಲು ಜಾರಿ ಮರದಿಂದ ಬಿದ್ದು ವ್ಯಕ್ತಿ ಸಾವು..!
– ಉಡುಪಿ : 10ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು
– ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಬಸ್!
– ಬೆಳ್ತಂಗಡಿ: ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ
– ಹೊನ್ನಾವರ: ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
NAMMUR EXPRESS NEWS
ಹೆಬ್ರಿ: ವ್ಯಕ್ತಿಯೋರ್ವರು ಸೊಪ್ಪು ಕಡಿಯುತ್ತಿದ್ದ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೈರಂಪಳ್ಳಿ ಗ್ರಾಮದ ಗೋಪಾಲ(32) ಎಂದು ಗುರುತಿಸಲಾಗಿದೆ. ಇವರು ಅಡಿಕೆ ಮರದ ಬುಡಕ್ಕೆ ಸೊಪ್ಪನ್ನು ಹಾಕಲು ಮಾವಿನ ಮರವನ್ನು ಹತ್ತಿ ಸೊಪ್ಪನ್ನು ಕೊಯ್ಯುತ್ತಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಉಡುಪಿ : 10ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು
ಉಡುಪಿ : 10ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿರ್ವದಲ್ಲಿ ನಡೆದಿದೆ. ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಚಂದ್ರಿಕಾ ದಂಪತಿಗಳ ಪುತ್ರಿ, ಶಿರ್ವಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಇಂದು ಹೃದಯಾಘಾತದಿಂದ ನಿಧನಳಾಗಿದ್ದಾಳೆ. ಬೆಳಿಗ್ಗೆ ಎದೆ ನೋವು ಕಾಣಿಸಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾಳೆಎಂದು ತಿಳಿದುಬಂದಿದೆ. ಇವಳಿಗೆ ಮೊದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು ಎನ್ನಲಾಗಿದೆ.
– ಬಂಟ್ವಾಳ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ
ಬಂಟ್ವಾಳ: ರಾ.ಹೆ.75ರ ತುಂಬೆ ರಾಮಲಕಟ್ಟೆ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಘಟನೆ ನಡೆದಿದೆ. ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಬಸ್ ಬಿ.ಸಿ.ರೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದು, ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಘಟನೆಯಿಂದ ಕೆಲ ಹೊತ್ತು ಸಂಚಾರಕ್ಕೆ ತೊಡಕು ಉಂಟಾಗಿದ್ದು, ಬಳಿಕ ಬಸ್ ತೆರವು ಮಾಡಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬೆಳ್ತಂಗಡಿ: ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆವರೆಗೆ ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣದ ತಡೆ ಗೋಡೆ ಸಂಪೂರ್ಣವಾಗಿ ಕುಸಿದು ಪಕ್ಕದ ಗದ್ದೆಗೆ ಬಿದ್ದಿದೆ. ಉಳಿದ ಭಾಗವು ಕುಸಿಯುವ ಹಂತದಲ್ಲಿದೆ. ಜೀರ್ಣೋದ್ಧಾರದ ಅವಧಿಯಲ್ಲಿ ರಚಿಸಲಾದ ತಡೆಗೋಡೆ ಕುಸಿದಿರುವುದರಿಂದ ಪಕ್ಕದ ರಸ್ತೆಗೂ ಹಾನಿಯಾಗಿದೆ. ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಆಡಳಿತ ಮಂಡಳಿ ಹಾಗೂ ದೇವಸ್ಥಾನದ ಭಕ್ತರು ಆಗ್ರಹಿಸಿದ್ದಾರೆ. ಇತ್ತ ಮಳೆಯಿಂದಾಗಿ ಧರ್ಮಸ್ಥಳ ಸಮೀಪ ಮರವೊಂದು ರಸ್ತೆಗೆ ಉರುಳು ಬಿದ್ದಿದ್ದು ತೆರವು ಕಾರ್ಯ ನಡೆದಿದೆ. ಧರ್ಮಸ್ಥಳ ಉಜಿರೆ ಮಾರ್ಗವಾಗಿ ಸಾಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ನೀರಚಿಲುಮೆ ಬಳಿ ರಸ್ತೆ ಬದಿ ಚರಂಡಿಗೆ ಇಳಿದ ಘಟನೆ ನಡೆದಿದೆ.
– ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಭಾರಿ ಮಳೆಯಿಂದ ಗುಡ್ಡ ಕುಸಿತವುಂಟಾಗಿ ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಗುಡ್ಡ ಕುಸಿತವುಂಟಾಗಿದ್ದು, ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು, ಬೃಹತ್ ಬಂಡೆಗಳು, ಮರಗಳು ಬಿದ್ದಿವೆ. ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಮಣ್ಣು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ವಿಳಂಬವಾಗಿದೆ.