ರಾಜ್ಯದಲ್ಲಿ ಕಾಡಾನೆ ಕಾಟ!
– ಹಾಸನದಲ್ಲಿ ಕಾರ್ಮಿಕನ ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ
– ಚಿಕ್ಕಮಗಳೂರು : ಬಾಳೆ ತೋಟಕ್ಕೆ ನುಗ್ಗಿ ಧ್ವಂಸ ಮಾಡಿದ ಆನೆ
– ಕೊಡಗು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ
NAMMUR EXPRESS NEWS
ಹಾಸನ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಲಕ್ಷ್ಮಣ (46) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಾಟೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಐಬಿಸಿ ಎಸ್ಟೇಟ್ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ, ಕಾಫಿ ತೋಟದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಲಕ್ಷ್ಮಣ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.
ಲಕ್ಷ್ಮಣ ಚಿರಾಟ ಕೇಳಿ ಅಲ್ಲಿದ್ದವರು ಕಾಡಾನೆಯನ್ನು ಓಡಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಲಕ್ಷ್ಮಣ ಅವರನ್ನು ಕೂಡಲೇ ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
– ಚಿಕ್ಕಮಗಳೂರು : ಬಾಳೆ ತೋಟಕ್ಕೆ ನುಗ್ಗಿ ಧ್ವಂಸ ಮಾಡಿದ ಆನೆ
ಚಿಕ್ಕಮಗಳೂರು : ಕಾಡಾನೆ ಹಾವಳಿ ಮುಂದುವರಿದಿದೆ. ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ತೋಟಕ್ಕೆ ನುಗ್ಗಿದ ಕಾಡಾನೆ ಹಾನಿ ಮಾಡಿದೆ. ತೋಟ ಹಾಗೂ ಮನೆಯ ಮುಂಭಾಗದ ಬಾಳೆ ತೋಟ ಧ್ವಂಸ ಮಾಡಿದೆ. ಬಾಳೆ, ಎಲಕ್ಕಿ, ಕಾಫಿ ಬೆಳೆ ಹಾನಿ ಮಾಡಿದೆ. ದಿನ ನಿತ್ಯವೂ ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಕಾಡಾನೆ ದಾಳಿ ಮಾಡುತ್ತಿದೆ.
– ಕೊಡಗು : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ
ಕೊಡಗು : ಆನೆಕಾಡು ಬಳಿಯ ಮೆಟ್ನಳನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡಿತ್ತು. ಹೆದ್ದಾರಿಯಲ್ಲಿ ಸಾಗಿದ ಕಾಡಾನೆಯಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆಹಾರ ಅರಸಿ ಕಾಡಿನಿಂದ ನಾಡಿಗೆ ಸಲಗವೊಂದು ಲಗ್ಗೆ ಇಟ್ಟಿತ್ತು. ಕಾಡಾನೆ ಓಡಾಟದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.