ಟಾಪ್ 3 ನ್ಯೂಸ್ ಕರಾವಳಿ
ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!?
– ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.!
– ಮಂಗಳೂರು: ಹಾಡಹಗಲೇ ಫೈನಾನ್ಸ್ ಗೆ ನುಗ್ಗಿದ ದರೋಡೆಕೋರರು
– ಬಂಟ್ವಾಳ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನದಿಗೆ ಬಿದ್ದು ಸಾವು
NAMMUR EXPRESS NEWS
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಕೋರಿಕೆ ಮತ್ತು ಸಿಬಿಐ ವಿಶೇಷ ಮಕ್ಕಳ ನ್ಯಾಯಾಲಯದ ಆದೇಶ ರದ್ದುಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ವಿದ್ಯಾರ್ಥಿನಿಯ ತಂದೆ ಧರ್ಮಸ್ಥಳದ ನಿವಾಸಿ ಚಂದಪ್ಪ ಗೌಡ, ಖುಲಾಸೆಗೊಂಡಿರುವ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಸಂತೋಷ್ ರಾವ್ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ನಡೆಸಿದೆ.
ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಪಿ.ಪ್ರಸನ್ನ ಕುಮಾರ್, ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್ ರಾವ್ನನ್ನು ಬಂಧಿಸಲಾಗಿತ್ತು. ಆತ ಆ ಊರಿನವನಲ್ಲ. ಘಟನಾ ಸ್ಥಳದಲ್ಲಿ ಇದ್ದಿದ್ದೇಕೆ ಎಂಬುದಕ್ಕೆ ಆತ ವಿವರಣೆ ನೀಡಿಲ್ಲ. ಘಟನಾ ಸ್ಥಳದಲ್ಲಿ ಬಿಳಿ ಪಂಚೆ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಆತನ ಕೇಶ ಸಿಕ್ಕಿದೆ. ಈ ಕೂದಲು ಆತನದೇ ಎಂಬುದಾಗಿ ಡಿಎನ್ಎ ವರದಿಯಲ್ಲಿ ರುಜುವಾತಾಗಿದೆ. ಇದಕ್ಕೆ ಪಾಟೀ ಸವಾಲಿನ ಸಂದರ್ಭದಲ್ಲಿ ಆತ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವಾದಿಸಿದ್ದಾರೆ. ಸಂತೋಷ್ ರಾವ್ ಬೆನ್ನಿನಲ್ಲಿ ಉಗುರಿನಿಂದ ಪರಚಿದ ಗಾಯವಾಗಿದೆ. ಈ ರೀತಿ ಎಲ್ಲಿ ಆಯ್ತು ಎಂಬುದನ್ನು ಆತ ಹೇಳಿಲ್ಲ. ಮಂಡಿಯಲ್ಲಿ ಗಾಯವಾಗಿತ್ತು. ಅದನ್ನೂ ಹೇಳಿಲ್ಲ. ಇವೆಲ್ಲವೂ ವೈದ್ಯಕೀಯ ದಾಖಲೆಗಳಾಗಿವೆ. ಹೀಗಾಗಿ, ಆತನೇ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ. ಸಂತೋಷ್ ರಾವ್ ಮತ್ತು ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಪ್ರಕರಣದ ಮರು ತನಿಖೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸೌಜನ್ಯ ತಂದೆಯೇ ಮರು ತನಿಖೆಗೆ ಕೋರಿದ್ದರು. ಈ ವಿಚಾರವನ್ನು ಹಿಂದೆಯೇ ಹೈಕೋರ್ಟ್ ಬೇರೊಂದು ಪೀಠ ನಿರ್ಧರಿಸಿದ್ದು, ಮರು ತನಿಖೆಗೆ ನಿರಾಕರಿಸಿತ್ತು. ಈಗ ಅದೇ ಪರಿಹಾರ ಕೋರಲಾಗದು. ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್ ಯಾರು ಎಂದು ತನಿಖೆ ನಡೆಸಬೇಕು ಎಂದು ಕೋರಲಾಗದು. ಹೀಗಾಗಿ, ಆತನ ಅರ್ಜಿಯನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿರುವ ಪೀಠ, ತೀರ್ಪು ಕಾಯ್ದಿರಿಸಿದೆ.
ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಬಂಟ್ವಾಳದಲ್ಲಿ ನದಿ ನೀರಿಗೆ ಬಿದ್ದು ಸಾವು
ನೇತ್ರಾವತಿ ನದಿ ಬಳಿಯ ತೋಡುವೊಂದರಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದ ವ್ಯಕ್ತಿಯೊಬ್ಬರು ನದಿಗೆ ಬಿದ್ದು ನೀರು ಪಾಲಾಗಿರುವ ಘಟನೆ ಗುರುವಾರ ಸಂಜೆ ತಾಲೂಕಿನ ಅಜಿಲಮೊಗರು ಕೂಟೇಲು ಬಳಿ ಸಂಭವಿಸಿದೆ. ಸುರತ್ಕಲ್ ಕಾನೂ ಮೂಲದ ಮೈಕಲ್(53) ನೀರುಪಾಲಾದವರು. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಸ್ನೇಹಿತ ಸುದೀಪ್ ಜತೆ ಮೀನು ಹಿಡಿಯಲು ಅಜಿಲಮೊಗರು ಭಾಗಕ್ಕೆ ಅವರು ಹೋಗಿದ್ದರು. ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಗಡಿ ಪ್ರದೇಶವಾದ ಅಜಿಲಮೊಗರು ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ಸೇರುವ ಪಕ್ಕದಲ್ಲೇ ತೋಡಿಗೆ ಅಡ್ಡವಾಗಿ ನಿರ್ಮಿಸಿರುವ ಹಳೆಯ ಕಿಂಡಿ ಅಣೆಕಟ್ಟಿನ ಮೇಲೆ ನಿಂತು ಗಾಳ ಹಾಕುತ್ತಿದ್ದ ವೇಳೆ ಮೈಕೆಲ್ ಆಕಸ್ಮಿಕವಾಗಿ ನೀರಿಗೆ ಕಾಲುಜಾರಿ ಬಿದ್ದಿದ್ದಾರೆ. ತೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಅವರನ್ನು ರಕ್ಷಿಸುವುದಕ್ಕೆ ಸಾಧ್ಯವಾಗಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ನದಿಯಲ್ಲಿ ಹುಡುಕುವ ಪ್ರಯತ್ನ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಗ್ಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಕೆಯಾದಾಗ ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಒಟ್ಟು ನಾಲ್ಕು ಮಂದಿ ಮೀನು ಹಿಡಿಯಲು ಬಂದಿದ್ದು, ಇಬ್ಬರು ಮಾತ್ರ ಮನೆಗೆ ವಾಪಾಸ್ಸಾಗಿದ್ದರು. ಮೈಕೆಲ್ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದು, ಬಳಿಕ ಊರಿಗೆ ಮರಳಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.
– ಮಂಗಳೂರು: ಹಾಡಹಗಲೇ ಫೈನಾನ್ಸ್ ಗೆ ನುಗ್ಗಿದ ದರೋಡೆಕೋರರು.!
ಮಂಗಳೂರು : ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಒಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆಕ್ಟಿವಾದಲ್ಲಿ ಆಗಮಿಸಿದ ಆರೋಪಿಗಳು ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸ್ಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಗೆ ನುಗ್ಗಿದ್ದಾರೆ. ಆರೋಪಿಗಳು ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್ಗೆ ಬಲಾತ್ಕಾರವಾಗಿ ಕೈ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ನ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ದೂಡಿ ಹಾಕಿದ್ದು, ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿದ ಸಂದರ್ಭ ಆರೋಪಿಗಳು ಪರಾರಿಯಾಗಿರುತ್ತಾರೆ. ಫೈನಾನ್ಸ್ಗೆ ನುಗ್ಗಿದ ಇಬ್ಬರಲ್ಲಿ ಒಬ್ಬ ಹೆಲೈಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ. ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಂದಿಟ್ಟ ಆಸಿಡ್ ಕ್ಲೋರೋಫಾರ್ಮ್ ಎನ್ನಲಾಗಿದ್ದು ಹೆಚ್ಚುವರಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವ್ಯವಸ್ಥಿತ ಸಂಚು ನಡೆಸಿ ದರೋಡೆಯ ಪ್ರಯತ್ನ ನಡೆಸಿರುವುದರ ಹಿಂದೆ ಜಾಲವೊಂದರ ಕೈವಾಡ ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.