ಕರಾವಳಿ ನ್ಯೂಸ್
– ಕುಮಾರಧಾರ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ!
– ಕಡಬ: ಅಗ್ನಿಶಾಮಕ, ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿ ಸೇಫ್
– ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ? ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆಯೇ..?
– ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಲ್ ಹೃದಯ ಸ್ತಂಭನದಿಂದ ನಿಧನ
NAMMUR EXPRESS NEWS
ಕಡಬ: ವ್ಯಕ್ತಿಯೊಬ್ಬರು ಕುಮಾರಧಾರ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿದ ಘಟನೆ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕೂಡಲೇ ಅಗ್ನಿಶಾಮಕ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಕುಮಾರಧಾರ ನದಿ ಕೂಡ ತುಂಬಿ ಹರಿಯುತ್ತಿದೆ. ಈ ಮಧಯೆ ಬೆಳಗ್ಗೆ ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ತನ್ನನ್ನು ರಕ್ಷಿಸುವಂತೆ ಬೊಬ್ಬೆ ಹಾಕುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯು ಯುವಕನನ್ನು ನದಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಬಳಿಕ ಆತನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಈ ವ್ಯಕ್ತಿಯನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ. ಈ ವ್ಯಕ್ತಿಗೆ ಸೇರಿದ ಬ್ಯಾಗ್ ಪುಳಿಕುಕ್ಕು ಬಸ್ ನಿಲ್ದಾಣದ ಬಳಿ ಲಭಿಸಿದೆ. ಈ ವ್ಯಕ್ತಿಯು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಅಥವಾ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆಯೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಲ್ ಹೃದಯ ಸ್ತಂಭನದಿಂದ ನಿಧನ
ಉಳ್ಳಾಲ ಖಾಝಿ, ಮರ್ಹೂಂ ಶೈಖುನಾ ತಾಜುಲ್ ಉಲಾಮಾ ಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸೈಯದ್ ಫಝಲ್ ಕೋಯಮ್ಮ ತಂಙಲ್ ಅಲ್ ಬುಖಾರಿ(ಕೂರತ್ ತಂಙಲ್) ಸೋಮವಾರ ಬೆಳಗ್ಗೆನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕೇರಳದ ಕಣ್ಣೂರಿನ ಎಟ್ಟಿಕ್ಕುಳಂನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಬೆಳಗ್ಗೆ ಸುಮಾರು 10 ಗಂಟೆಗೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಉಳ್ಳಾ ಸೈಯದ್ ಮದನಿ ದರ್ಗಾ ವಠಾರದಲ್ಲಿ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಲ್ಲಿ ಸಿದ್ಧರಾಗುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆವರೆಗೆ ಎಟ್ಟುಕ್ಕುಳಂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಥಿವ ಶರೀರವನ್ನು ಸಂಜೆ 7ಕ್ಕೆ ಉಳ್ಳಾಲ ಜುಮಾ ಮಸೀದಿ & ಸೈಯದ್ ಮದನಿ ದರ್ಗಾ ವಠಾರಕ್ಕೆ ತರಲಾಗುತ್ತದೆ. ಬಳಿಕ ಕಡಬದ ಕೂರತ್ಗೆ ಕೊಂಡೊಯ್ದು, ಅಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದಫನ ಕಾರ್ಯ ನೆರವೇರಿಸಲಾಗುತ್ತದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿಜಿ. ಹನೀಫ್ ಹಾಜಿ ತಿಳಿಸಿದ್ದಾರೆ.
ಖಾಝಿ ಕೂರತ್ ತಂಙಳ್ ಅವರ ನಿಧನಕ್ಕೆ ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಯೆನೆಪೊಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ, ಮಂಜೇಶವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಅಥಾವುಲ್ಲಾ ತಂಙಳ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.