ಟಾಪ್ ನ್ಯೂಸ್ ಮಲ್ನಾಡ್ -ಕರಾವಳಿ
ಮಣಿಪಾಲದಲ್ಲಿ ಕೊಪ್ಪ ಮೂಲದ ಸಿಎ ವಿದ್ಯಾರ್ಥಿನಿ ಆತ್ಮಹತ್ಯೆ ಶರಣು!
– ಕೊಪ್ಪ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿದ್ಯಾರ್ಥಿನಿ
– ರಾಹುಲ್ ಗಾಂಧಿ ವಿರುದ್ಧ ಹೇಳಿಕೆ: ಶಾಸಕ ವೈ. ಭರತ್ ಶೆಟ್ಟಿ ವಿರುದ್ಧ ಎಫ್ಐಆರ್!
– ಏಕ ವಚನದಲ್ಲೇ ಭರತ್ ಶೆಟ್ಟಿ ರಾಹುಲ್ ವಿರುದ್ಧ ವಾಗ್ಧಾಳಿ
NAMMUR EXPRESS NEWS
ಮಣಿಪಾಲ: ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮಣಿಪಾಲದ ಹೆರ್ಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ(20) ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ತಂದೆ-ತಾಯಿಯ ಜತೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.
ಶ್ರೀನಿಧಿ ಅವರು ಕೊಪ್ಪ ಹರಂದೂರು ಗ್ರಾಮದ ಮಹೇಶ್ ಎಂಬವರ ಮಗಳು. ಮಹೇಶ್ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣಕ್ಕೆ ಅಲ್ಲಿಯೇ ಸಮೀಪದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆದರೆ, ಯಾವ ಕಾರಣಕ್ಕೆ ಶ್ರೀನಿಧಿ ಪ್ರಾಣವನ್ನೇ ಕಳೆದುಕೊಳ್ಳುವ ಕಠಿಣ ನಿರ್ಧಾರ ಮಾಡಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ: ಶಾಸಕ ವೈ. ಭರತ್ ಶೆಟ್ಟಿ ವಿರುದ್ಧ ಎಫ್ಐಆರ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ವೈ. ಭರತ್ ಶೆಟ್ಟಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪಾಲಿಕೆ ಸದಸ್ಯ ಕಾಂಗ್ರೆಸ್ನ ಅನಿಲ್ ಕುಮಾರ್ ನೀಡಿದ್ದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಾವೂರು ಪೊಲೀಸರು 351, 353 ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಭರತ್ ಶೆಟ್ಟಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಅಲ್ಲದೆ, ಹಲವು ಕಾಂಗ್ರೆಸ್ ನಾಯಕರು ಭರತ್ ಶೆಟ್ಟಿ ಅವರ ಹೇಳಿಕೆಯನ್ನು ಖಂಡಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಭರತ್ ಶೆಟ್ಟಿ ಅವರು, ರಾಹುಲ್ ಗಾಂಧಿ ಅವರಿಗೆ ಪಾರ್ಲಿಮೆಂಟ್ಗೆ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತೆಂದು ಅನಿಸುತ್ತಿದೆ ಎಂದಿದ್ದರು. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ತೆರೆದರೆ ಸುಟ್ಟು ಬೂದಿಯಾಗುತ್ತದೆ ಎನ್ನುವುದು ಗೊತ್ತಿಲ್ಲ ಎನ್ನುವ ವಿವಾದಾತ್ಮಕವಾಗಿ ಏಕವಚನದಲ್ಲೇ ಭರತ್ ಶೆಟ್ಟಿ ರಾಹುಲ್ ವಿರುದ್ಧ ವಾಗ್ಧಾಳಿ ನಡೆಸಿದ್ದರು.