ಟಾಪ್ 5 ನ್ಯೂಸ್ ಕರಾವಳಿ
ಹೆಬ್ರಿ ಹೆಚ್ಚಿದ ಆನೆ ದಾಳಿ: ಜನತೆಗೆ ಜೀವ ಭಯ!
– ಸ್ಥಳೀಯರ ಸಂಚಾರಕ್ಕೆ ಅರಣ್ಯ ಇಲಾಖೆಯಿಂದಲೇ ವಾಹನ ವ್ಯವಸ್ಥೆ
ಉಡುಪಿ ಗರುಡ ಗ್ಯಾಂಗ್ಗೆ ಸಹಾಯ: ಉಪ್ಪಿನಂಗಡಿ ಯುವತಿ ಅರೆಸ್ಟ್!
– ಗರುಡ ಗ್ಯಾಂಗ್ನ ಪಾತಕಿಗಳಿಗೆ ಹಣ ಸಹಾಯ
– ಕುಂದಾಪುರ: ಬೈಕ್ಗೆ ಬಸ್ ಡಿಕ್ಕಿ: ಪೌರ ಕಾರ್ಮಿಕ ಸಾವು
– ಮೂಲ್ಕಿ: ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್: ಯುವಕ ಸಾವು
– ಮಣಿಪಾಲ: ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ?
NAMMUR EXPRESS NEWS
ಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯದ ಪರಿಸರದ ನೆಲ್ಲಿಕಟ್ಟೆ ಬಡಾ ತಿಂಗಳೆ ಪರಿಸರದಲ್ಲಿ ಮತ್ತೆ ಆನೆ ಹಾವಳಿ ತೀವ್ರವಾಗಿದ್ದು, ಸ್ಥಳೀಯರು ಸಾಕಷ್ಟು ಭಯಭೀತರಾಗಿದ್ದಾರೆ. ಈ ಪರಿಸರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಸುಮಾರು 5 ಕಿಮೀ. ದೂರು ನಡೆದುಕೊಂಡೇ ಬಸ್ಗೆ ಹತ್ತಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಆನೆ ದಾಳಿಯಿಂದಾಗಿ ಈ ಭಾಗದ ಜನರು ಹೆಚ್ಚು ಭಯದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಇಲ್ಲಿ ನಡೆದುಕೊಂಡು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಜುಲೈ 12ರಿಂದ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಯಾದ ಗೌರವ ಅವರು ಭರವಸೆ ನೀಡಿದ್ದಾರೆ.
ಉಡುಪಿ ಗರುಡ ಗ್ಯಾಂಗ್ಗೆ ಸಹಾಯ: ಉಪ್ಪಿನಂಗಡಿ ಯುವತಿ ಅರೆಸ್ಟ್!
– ಗರುಡ ಗ್ಯಾಂಗ್ನ ಪಾತಕಿಗಳಿಗೆ ಹಣ ಸಹಾಯ
ಇತ್ತೀಚೆಗೆ ಸಿನಿಮಾ ಶೈಲಿಯಲ್ಲಿ ನಡುರಸ್ತೆಯಲ್ಲಿ ಗ್ಯಾಂಗ್ವಾರ್ ನಡೆಸಿ ಜೈಲು ಸೇರಿರುವ ನಟೋರಿಯಸ್ ಗರುಡ ಗ್ಯಾಂಗ್ಗೆ ಆರ್ಥಿಕ ಸಹಾಯ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ 21 ವರ್ಷದ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಉಪ್ಪಿನಂಗಡಿಯ ಶಫೀರಾ(21) ಎಂದು ಗುರುತಿಸಲಾಗಿದೆ. ಈಕೆಯು ಗರುಡ ಗ್ಯಾಂಗ್ನ ಪಾತಕಿಗಳಿಗೆ ಹಣ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಜತೆಗೆ ರೌಡಿ ಗ್ಯಾಂಗ್ನ ಸಹಚರರಿಗೆ ಆಶ್ರಯ ಕೂಡ ನೀಡಿದ್ದಳು. ಈ ನಡುವೆ ಗ್ಯಾಂಗ್ ಸದಸ್ಯರಿಗೆ ಶಫೀರಾ ಫೋನ್ ಕೂಡ ನೀಡಿದ್ದಳು ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನಾಲ್ಕೈ ಮಂದಿ ಗರುಡ ಗ್ಯಾಂಗ್ನ ಸಹಚರರನ್ನು ಬಂಧಿಸಿದ್ದರು. ಈ ಗ್ಯಾಂಗ್ ಮತ್ತೊಂದು ಗ್ಯಾಂಗ್ ಜತೆಗೆ ಗ್ಯಾಂಗ್ವಾರ್ ನಡೆಸಿತ್ತು. ಅಲ್ಲದೆ, ಈ ಗರುಡ ಗ್ಯಾಂಗ್ನ ಪ್ರಮುಖ ಆರೋಪಿಗಳು ಜೈಲಿನಲ್ಲಿಯೂ ದಾಂಧಲೆ ನಡೆಸಿದ್ದು, ಬಳಿಕ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ.
ಕುಂದಾಪುರ: ಬೈಕ್ಗೆ ಬಸ್ ಡಿಕ್ಕಿ: ಪೌರ ಕಾರ್ಮಿಕ ಸಾವು
ಕುಂದಾಪುರ: ಬೈಕ್ಗೆ ಖಾಸಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜು.11ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಸಮೀಪದ ಹಂಗಳೂರು ದುರ್ಗಾಂಬ ಬಸ್ ಡಿಪೋ ಬಳಿ ನಡೆದಿದೆ.ಮೃತಪಟ್ಟ ಬೈಕ್ ಸವಾರರನ್ನು ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ಸುಂದರ(39) ಎಂದು ಗುರುತಿಸಲಾಗಿದೆ. ಕೋಟೇಶ್ವರದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬೈಕ್ಗೆ ಹಂಗಳೂರು ದುರ್ಗಾಂಬ ಡಿಪೋ ಒಳಗೆ ಹೋಗುತ್ತಿದ್ದ ವೇಳೆ ಬಸ್ನ್ನು ಚಾಲಕ ಹಠಾತ್ ಆಗಿ ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ತಿರುಗಿಸಿದ ವೇಳೆ ನೇರವಾಗಿ ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕುಂದಾಪುರ ಪುರಸಭೆ ಕಾರ್ಮಿಕರಾದ ಸುಂದರ ಅವರು ಮೂಲತಃ ಬಾರ್ಕೂರು ಬಂಡಿ ಮಠದವರಾಗಿದ್ದ, ಕುಂದಾಪುರ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೂಲ್ಕಿ: ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು
ಮೂಲ್ಕಿ: ಮನೆಗೆ ಶೀಟು ಅಳವಡಿಸುವಾಗ ಯುವಕನೋರ್ವ ವಿದ್ಯುತ್ ಶಾಕ್ ತಗುಲಿಮೃತಪಟ್ಟ ಘಟನೆ ದಕ್ಷಿಣ ಕನ್ನಡ ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ. ಮೃತಪಟ್ಟ ಯುವಕ ಹಳೆಯಂಗಡಿಯ ಲೈಟ್ ಹೌಸ್ ನಿವಾಸಿ ಅವಿನಾಶ್ ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿಯ ಉಲ್ಲಂಜೆಯಲ್ಲಿ ಮನೆಯೊಂದಕ್ಕೆ ಶೀಟ್ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದಾಗ, ಕಬ್ಬಿಣದ ಪೈಪ್ ಮೇಲಕ್ಕೆತ್ತುವಾಗ ವಿದ್ಯುತ್ ತಂತಿ ಕಬ್ಬಿಣದ ಪೈಪ್ ಗೆ ತಾಗಿದ್ದು ಕೂಡಲೇ ಅವಿನಾಶ್ ಕುಸಿದು ಬಿದ್ದಿದ್ದು ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ
ಉದ್ಯಾವರ ಕಂಪನ್ಬೆಟ್ಟ ನಿವಾಸಿ ಮೊಹಮ್ಮದ್ ಪರ್ವೇಝ್ ಉಮರ್ಗೆ(25)ಗೆ ಪರಿಚಯದ ಫೈಝಲ್ ಕರೆ ಮಾಡಿ ನಿನ್ನ ಬಳಿ ಮಾತನಾಡಲು ಇದೆ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಫೈಝಲ್ ಜತೆಗೆ ದಾವುದ್ ಇಬ್ರಾಹಿಂ, ಇಸಾಕ್ ಮೂವರು ಸೇರಿಕೊಂಡು ಪರ್ವೇಜ್ ಉಮರ್ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದಿದ್ದಾರೆ. ಅನಂತರ ಪರ್ವೇಜ್ ಉಮರ್ಗೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು ನಮಗೆ ಮಾಹಿತಿ ಬಂದಿದ್ದು, ಮಣಿಪಾಲದಲ್ಲಿ ನೀನು ಗಾಂಜಾ ಮಾರಾಟ ಮಾಡಿದರೆ ನಮಗೆ ತಿಂಗಳ ಮಾಮೂಲಿ ಹಣ ಕೊಡಬೇಕು. ಇದಕ್ಕೆ ಒಪ್ಪದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ಜತೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅನಂತರ ನೀವು ಹೇಳಿದ ಹಾಗೆ ಕೇಳುತ್ತೇನೆ. ನನ್ನನ್ನು ಬಿಟ್ಟುಬಿಡಿ ಎಂದಿದ್ದಕ್ಕೆ ಬೆಳಗಿನ ಜಾವ ಅವರ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪರ್ವೇಜ್ ದೂರು ನೀಡಿದ್ದಾರೆ. ತಂಡದಲ್ಲಿದ್ದ ದಾವೂದ್ ಇಬ್ರಾಹಿಂ ಎಂಬವನು ಪರ್ವೇಜ್ಗೆ ದೊಣ್ಣೆಯಿಂದ ಕಾಲಿಗೆ, ಕೈಗೆ ಹಲ್ಲೆ ಮಾಡಿದ್ದು, ಇಸಾಕ್ಗೂ ಹಲ್ಲೆ ಮಾಡಿದ್ದಾನೆ ಫೈಝಲ್ ಕೂಡ ಕೈಯಿಂದ ಕೆನ್ನೆ, ಬೆನ್ನಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಗಾಯಗೊಂಡ ಪರ್ವೇಜ್ ಉಮರ್ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.