ಕಳಸದ ಹಲವು ಕಡೆ ಭೂ ಕುಸಿತ!
– 110.6 ಮಿ.ಮಿ ಮಳೆ: ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಡೆ
– ಮರಗಳು ಧರೆಗೆ: ಕತ್ತಲಲ್ಲಿ ಕಾಫಿ ನಾಡು…!
NAMMUR EXPRESS NEWS
ಕಳಸ: ಕಳಸ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಯ ಅಬ್ಬರದ ಪರಿಣಾಮ ಕೆಲವೆಡೆ ಭೂಕುಸಿತವಾಗಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುಮಾರು 110.6 ಮಿ.ಮಿ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಸೋಮವಾರ ರಾತ್ರಿ ಜಲಾವೃತ್ತಗೊಂಡಿತು. ಹೊರನಾಡಿಗೆ ಹೋಗುವ ಪ್ರವಾಸಿಗರು ಮತ್ತು ಸ್ಥಳೀಯರು ಹಳುವಳ್ಳಿ ಮಾರ್ಗವಾಗಿ ಹೊರನಾಡಿಗೆ ಸಂಪರ್ಕಿಸಿದರು.
ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲ್ – ಹೆಮ್ಮಕ್ಕಿ ರಸ್ತೆಯ ಕಂಕೋಡ್ ಬಳಿ ರಸ್ತೆಗೆ ಧರೆ ಕುಸಿದಿದ್ದು, ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದಾಡಿಯಿಂದ ಮೇಲ್ಗುಳ್ಳಿಗೆ ತೆರಳುವ ರಸ್ತೆಯಲ್ಲಿ ಮರ ಹಾಗೂ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹೊರನಾಡು ಗ್ರಾಮದ ಮುಂಡುಗದ ಮನೆ ರಸ್ತೆಯಲ್ಲಿ ಭೂಕುಸಿತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹೊರನಾಡು ಪಂಚಾಯಿತಿ ವತಿಯಿಂದ ತೆರವು ಮಾಡಲಾಯಿತು. ಮಳೆಯ ಪರಿಣಾಮ ಮುಂಜಾಗೃತಾ ಕ್ರಮವಾಗಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ.ಆದರೆ ಬೆಳಿಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿತ್ತು.