ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ!
– ಜನ ಜೀವನ ಅಸ್ತವ್ಯಸ್ತ; ಹಲವು ತಾಲೂಕುಗಳಲ್ಲಿ ಮನೆಗಳು ಜಲಾವೃತ
– ಇನ್ನು 2 ದಿನ ಮಳೆ ಆತಂಕ: ಜನರೇ ಹುಷಾರ್
NAMMUR EXPRESS NEWS
ಉಡುಪಿ: ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು, ಅದರಲ್ಲಿಯೂ ಉಡುಪಿ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಹಳಷ್ಟು ಮನೆಗಳಿಗೆ ನೀರು ಕೂಡ ನುಗ್ಗುತ್ತಿದ್ದು, ಈಗಾಗಲೇ ನೂರಾರು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.ಮಳೆ ಪೀಡಿತ ಬ್ರಹ್ಮಾವರ, ಕೋಟ,ಕುಂದಾಪುರ & ಬೈಂದೂರಿನ ಪ್ರದೇಶಗಳಿಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಕೆಲವೆಡೆ ಭೂಕುಸಿತ ಉಂಟಾಗಿದ್ದು, ಇನ್ನು ಕೆಲವೆಡೆ ಸೇತುವೆ ಕುಸಿದು ಗ್ರಾಮಗಳ ನಡುವಿನ ಸಂಪರ್ಕ ಕಡಿದುಕೊಂಡಿದೆ.
ಹಲವೆಡೆ ಕಾಳಜಿ ಕೇಂದ್ರ
ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ನೀರು ತುಂಬಿರುವ ಕಾರಣ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಬ್ರಹ್ಮಾವರದ ಉಪ್ಪೂರು, ನೀಲಾವರ, ಮಟಪಾಡಿ ಹಾಗೂ ಆರೂರು ಗ್ರಾಮಗಳಲ್ಲಿ ಮನೆಗಳು ಜಲಾವೃತಗೊಂಡಿವೆ. ಈ ಹಿನ್ನಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದೆ. ಆದರೆ ಆರೂರು ಗ್ರಾಮದ ಎರಡು ಕಟುಂಬಗಳ ಒಟ್ಟು 9 ಮಂದಿಯನ್ನು ಬೆಳ್ಮಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿ ಅವರಿಗೆ ಉಳಿದುಕೊಳ್ಳುವುದಕ್ಕೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕುಂದಾಪುರ ಭಾಗದಲ್ಲಿ ಭಾರೀ ಮಳೆ
ಕುಂದಾಪುರದ ಬೇಳೂರು ಗ್ರಾಮದಲ್ಲಿಯೂ ಏಳು ಮಕ್ಕಳು ಸೇರಿ ಒಟ್ಟು 36 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಸೀತಾನದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಹುತೇಕ ಕಡೆ ಅಪಾರ ಪ್ರಮಾಣದಲ್ಲಿ ನಷ್ಟ-ಹಾನಿ, ಬೆಳೆ ನಾಶ ಉಂಟಾಗಿದೆ.