ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ದಾಳಿ!
– ಆನಂದ್ ಸಿಎಲ್ ಮನೆ ಮೇಲೆ ಲೋಕಾಯುಕ್ತ ದಾಳಿ
– ಉಪ್ಪಿನಂಗಡಿ: ಕೆಎಎಸ್ಆರ್ಟಿಸಿ ಬಸ್ ಗೆ ಬೆಂಕಿ
– ಮಂಗಳೂರಿನಲ್ಲಿ ರಸ್ತೆಯಲ್ಲೇ ಪಲ್ಟಿಯಾದ ಕಾರು!
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಬೇಟೆಯಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿಎಲ್ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಆನಂದ್ ಅವರ ಬೆಂಗಳೂರಿನ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆನಂದ್ ಅವರನ್ನು ಸರ್ಕಾರವು ಇತ್ತೀಚೆಗೆ ವರ್ಗಾವಣೆ ಮಾಡಿದ್ದು, ಸ್ಥಳ ನಿಯೋಜನೆ ನೀಡಿಲ್ಲಿಲ್ಲ. ಮಂಡ್ಯ ಮೂಲದ ಆನಂದ್ ಅವರು ಸೇನೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ ನಿವೃತ್ತಿ ಪಡೆದುಕೊಂಡು ಕೆಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದರು.
ಮಂಗಳೂರಿನಲ್ಲಿ ರಸ್ತೆಯಲ್ಲೇ ಪಲ್ಟಿಯಾದ ಕಾರು!
ಮಂಗಳೂರು: ಮಂಗಳೂರಿನ ಕುಂಟಿಕಾನದ ಬಳಿ ಮಳೆಯಿಂದಾಗಿ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೂಳೂರು ಕಡೆಯಿಂದ ಕೆಪಿಟಿ ಕಡೆಗೆ ಬರುತ್ತಿದ್ದ ಕಾರು ಕುಂಟಿಕಾನ ಜಂಕ್ಷನ್ ಬಳಿ ಸ್ಕಿಡ್ ಆಗಿ ರಸ್ತೆ ವಿಭಜಕದ ನಡುವೆ ಬಿದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ವ್ಯಕ್ತಿ ಹಾಗೂ ಅವರ ಪುತ್ರಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿರುವುದಾಗಿ ವರದಿಯಾಗಿದೆ.
ಉಪ್ಪಿನಂಗಡಿ: ಕೆಎಎಸ್ಆರ್ಟಿಸಿ ಬಸ್ ಗೆ ಬೆಂಕಿ; ತಪ್ಪಿದ ಅನಾಹುತ
ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ಗೆ ಬೆಂಕಿ ಹತ್ತಿಕೊಂಡ ಘಟನೆ ಉಪ್ಪಿನಂಗಡಿಯ ಹಳೆಗೇಟು ಬಳಿ ಗುರುವಾರ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಸ್ಥಳೀಯ ಯುವಕರ ತಂಡವು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಈ ಬಸ್ ಬೆಂಗಳೂರಿನಿಂದ ಮಂಗಳೂರು ಕಡೆಗೆ ಆಗಮಿಸುತ್ತಿರಬೇಕಾದರೆ, ಬಸ್ನ ಹಿಂಭಾಗದ ಎಸಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಇದನ್ನು ಗಮನಿಸಿದ್ದ ಬಸ್ ಚಾಲಕ ಹಳೇಗೇಟ್ ಬಳಿ ಬಸ್ ನಿಲ್ಲಿಸಿದ್ದಾರೆ. ಕೂಡಲೇ ಸಮಯಪ್ರಜ್ಞೆ ಮೆರೆದ ಸ್ಥಳೀಯರ ತಂಡವು ಕೆಸರು ನೀರನ್ನು ಬಸ್ಗೆ ಎರಚುವ ಮೂಲಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಈ ಬೆಂಕಿ ಅವಘಡದಲ್ಲಿ ಬಸ್ನ ಹಿಂಭಾಗಕ್ಕೆ ಹಾನಿಯಾಗಿದೆ.