ಚರಂಡಿಗೆ ಉರುಳಿದ ಬಸ್.: 17 ವಿದ್ಯಾರ್ಥಿಗಳಿಗೆ ಗಾಯ
– ಕರಾವಳಿಯ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿದ್ದರು!
– ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
– ಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ!
– ಕುಂದಾಪುರ: ಚಲಿಸುತ್ತಿದ್ದಾಗಲೇ ಕಳಚಿದ ಸರ್ಕಾರಿ ಬಸ್ಸಿನ ಟಯರ್!
NAMMUR EXPRESS NEWS
ಕೊಲ್ಲೂರು: ನಾಗೋಡಿ ಘಾಟಿ ಬಳಿ ಖಾಸಗಿ ಬಸ್ ಒಂದು ಚರಂಡಿಗೆ ಉರುಳಿದ ಘಟನೆ ಸೋಮವಾರ ನಡೆದಿದೆ. ಶಿವಮೊಗ್ಗದಿಂದ ಕೊಲ್ಲೂರಿನತ್ತ ಬಸ್ಸು ಬರುತ್ತಿತ್ತು. ಬಸ್ಸಿನಲ್ಲಿದ್ದ ಕೊಲ್ಲೂರು ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಹಾಗೂ ಕೊಲ್ಲೂರು ಜೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರೆಲ್ಲರೂ ಮಲೆನಾಡು ಭಾಗದ ವಿದ್ಯಾರ್ಥಿಗಳೆಂದು ತಿಳಿದುಬ೦ದಿದೆ. ಶಾಲೆಗೆ ನಿರಂತರ ರಜೆಯಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದ ಅವರು ಸೋಮವಾರ ಮತ್ತೆ ಶಾಲೆಗೆ ಹಿಂದಿರುಗುತ್ತಿದ್ದರು. ಬೆಳಿಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಚರಂಡಿಗೆ ನುಗ್ಗಿದೆ.
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ ಪಿ ಎಸ್.ಟಿ. ಸಿದ್ದಲಿಂಗಪ್ಪ ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತದಿಂದ ಮಕ್ಕಳು ಕಂಗಾಲಾಗಿದ್ದು, ಬೈಂದೂರು ಬಿಇಒ ನಾಗೇಶ್ ನಾಯಕ್ ಹಾಗೂ ಹೆಚ್ಚುವರಿ ಎಸ್ಪಿ ಶಾಲೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ!
ಬಂಟ್ವಾಳ : ಪೆಟ್ರೋಲ್ ಪಂಪ್ ಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಸಿ.ಎನ್.ಜಿ ಗ್ಯಾಸ್ ರಸ್ತೆಯಲ್ಲಿ ಸೋರಿಕೆಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಕೊಪ್ಪ ಎಂಬಲ್ಲಿ ಜು.21 ರಂದು ಬೆಳಗ್ಗೆ ಮಂಗಳೂರಿನಿಂದ ಬೆಳ್ತಂಗಡಿ ಪೆಟ್ರೋಲ್ ಪಂಪ್ ಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆಯಾಗಿದೆ. ತಕ್ಷಣ ಚಾಲಕ ಲಾರಿಯನ್ನು ಪಕ್ಕಕ್ಕೆ ಹಾಕಿ ಬಟ್ಟೆಯಿಂದ ಗ್ಯಾಸ್ ಸೋರಿಕೆ ತಡೆಯಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಬರುತ್ತಿದ್ದ ಕಾರಿನವರು ಕೂಡ ಸೋರಿಕೆಯನ್ನು ತಡೆಯಲು ಯತ್ನಿಸಿದರೂ ಆದ್ರೆ ಗ್ಯಾಸ್ ಸೋರಿಕೆಯಿಂದ ಉಸಿರಾಟ ಸಮಸ್ಯೆ ಅಗಿದ್ದರಿಂದ ಅಲ್ಲಿಂದ ಹೋಗಿದ್ದು. ಕೊನೆಗೆ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ರೂ ಒಂದು ಗಂಟೆಯಾದ್ರೂ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ. ಘಟನೆಯ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪುತ್ತೂರು ಠಾಣೆ ಎಎಸ್ಐ ಸುಂದರ ಕಾನಾವು ನಿಧನ
ಮನೆಯಲ್ಲಿರುವಾಗ ಮೂರು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದ ಪುತ್ತೂರು ನಗರ ಠಾಣೆಯ ಎಎಸ್ಐ ಸುಂದರ ಕಾನಾವು ಅವರು ಸೋಮವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಸುಂದರ ಅವರನ್ನು ಮಂಗಳೂರಿನ ಪಡೀಲ್ ಬಳಿಯಿರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಅಲ್ಲಿಂದ ಎಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಸುಂದರ ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ್ದ ಸುಂದರ ಅವರು ಮುಲ್ಕಿ ಠಾಣೆಯಿಂದ ತಮ್ಮ ಕರ್ತವ್ಯವನ್ನು ಆರಂಭಿಸಿದ್ದರು. ಬಳಿಕ ಅವರು ಸುಬ್ರಹ್ಮಣ್ಯ ಠಾಣೆಗೆ ಹೆಡ್ ಕಾನ್ಸ್ಸ್ಟೇಬಲ್ ಆಗಿ ಭಡ್ತಿ ಪಡೆದುಕೊಂಡಿದ್ದರು. ಅಲ್ಲಿಂದ ಮುಂದೆ ಅವರು ಸಂಪ್ಯ ಠಾಣೆಗೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಭಡ್ತಿಗೊಂಡಿದ್ದರು. ಇತ್ತೀಚೆಗಷ್ಟೇ ಪುತ್ತೂರು ಠಾಣೆಗೆ ವರ್ಗಾವಣೆಯಾಗಿದ್ದರು.
ಕುಂದಾಪುರ: ಚಲಿಸುತ್ತಿದ್ದಾಗಲೇ ಕಳಚಿದ ಸರ್ಕಾರಿ ಬಸ್ಸಿನ ಟಯರ್!
ಕುಂದಾಪುರ,: ಚಲಿಸುತ್ತಿದ್ದಾಗಲೇ ಸರ್ಕಾರಿ ಬಸ್ಸಿನ ಟಯರ್ ಕಳಚಿದ್ದು, ಸಂಭವನೀಯ ಅನಾಹುತ ತಪ್ಪಿದ ಘಟನೆ ಕುಂದಾಪುರ ಆಜ್ರ ಸಮೀಪದ ಹೆಮ್ಮಕ್ಕಿ ಬಳಿ ಶನಿವಾರ ನಡೆದಿದೆ. ಆಜಿಯಿಂದ ಕುಂದಾಪುರಕ್ಕೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದೆ. ಬಸ್ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಆಜಿಯ ನಿವಾಸಿ ಚಂದ್ರಹಾಸ ಅವರು ಪ್ರತಿಕ್ರಿಯೆ ನೀಡಿದ್ದು, ಕೆಎಸ್ಆರ್ಟಿಸಿ ಹಾಗೂ ಡಿಪೋ ಮೆಕ್ಯಾನಿಕ್ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.