ಶಿವಮೊಗ್ಗ ಟಾಪ್ 3 ನ್ಯೂಸ್…!
ಇಬ್ಬರು ಮಕ್ಕಳೊಂದಿಗೆ ಹೊಳೆಗೆ ಹಾರಿದಾ ತಾಯಿ..!
– ಪೊಲೀಸರ ಸಮಯ ಪ್ರಜ್ಞೆಯಿಂದ ಮೂರು ಜೀವಗಳ ರಕ್ಷಣೆ
ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು!
– ಜಾನುವಾರು, ಬೆಳೆ ಸೇರಿ ಅಪಾರ ಹಾನಿ
ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ!
– ಕಂತೆ ಕಂತೆ ಹಣ ಪತ್ತೆ
NAMMUR EXPRESS NEWS
ಶಿವಮೊಗ್ಗ: ಪೊಲೀಸರ ಸಮಯ ಪ್ರಜ್ಞೆಯಿಂದ 3 ಜೀವಗಳ ರಕ್ಷಣೆ ಮಾಡಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರೀತಿ(13), ಪ್ರಜ್ವಲ್(9) ಹಾಗೂ ಸಂಗೀತಾ(33) ಆತ್ಮಹತ್ಯೆಗೆ ಯತ್ನಿಸಿದ್ದವರು. ಜಿಲ್ಲೆಯ ಸಾಗರ ತಾಲೂಕಿನ ಅಣಲೇಕೊಪ್ಪ ನಿವಾಸಿಗಳು. ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು: ಜಾನುವಾರು, ಬೆಳೆ ಸೇರಿ ಅಪಾರ ಹಾನಿ!
ಶಿವಮೊಗ್ಗ: ಜಿಲ್ಲೆಯಲ್ಲಿ ಜುಲೈ 21 ರವರೆಗೆ ಸರಾಸರಿ 529.0 ಮಿ ಮೀ ವಾಡಿಕೆ ಮಳೆಯಾಗಿದೆ. 831.00 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.57 ರಷ್ಟು ಹೆಚ್ಚು ಮಳೆ ವರದಿಯಾಗಿದೆ. ಜುಲೈ ಮಾಹೆಯಲ್ಲಿ ಭಾರೀ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪರಿಹಾರ ಕ್ರಮಗಳು ಪ್ರಗತಿಯಲ್ಲಿವೆ.ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಶಶಿಕಲಾ, ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಗ್ರಾಮದ ನಾಗೇಂದ್ರ ಹಾಗೂ ಶಿಕಾರಿಪುರ ತಾಲ್ಲೂಕಿನ ಅಮಟೇಕೊಪ್ಪ ಗ್ರಾಮದ ನಾಗರಾಜ ಮರಣ ಹೊಂದಿರುತ್ತಾರೆ. ಶಶಿಕಲಾ ಮತ್ತು ನಾಗೇಂದ್ರ ಕುಟುಂಬದವರಿಗೆ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿರುತ್ತದೆ. ನಾಗರಾಜ ಅವರ ಕುಟುಂಬಕ್ಕೆ ವರದಿ ಬಂದ ನಂತರ ಪರಿಹಾರ ವಿತರಣೆ ಮಾಡಲಾಗುವುದು.ಜಿಲ್ಲೆಯಲ್ಲಿ ಜುಲೈ 19 ರವರೆಗೆ ಒಟ್ಟು 6 ಜಾನುವಾರು ಮೃತಪಟ್ಟಿದ್ದು, ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಅತಿ ಹೆಚ್ಚು ಮಳೆಯಿಂದ ಜೂನ್ವರೆಗೆ ಸುಮಾರು 7 ಮನೆ ಪೂರ್ಣ ಹಾನಿಗೊಳಪಟ್ಟಿದ್ದು, ಅದರಲ್ಲಿ 4 ಮನೆಗಳಿಗೆ ತಲಾ 1.20 ಲಕ್ಷ ರೂ. ನೀಡಲಾಗಿದೆ. 130 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಪರಿಹಾರ ನೀಡಲು ಕ್ರಮ ವಹಿಸಲಾಗಿದೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ, ಕಂತೆ ಕಂತೆ ಹಣ ಪತ್ತೆ!
ಶಿವಮೊಗ್ಗ : ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ಅಕ್ರಮ ಆಸ್ತಿಗಳಿಸಿರುವ ಪ್ರಕರಣದ ತನಿಖೆ ಕೈಗೊಂಡು ಪ್ರಕಾಶ್ ಜಿ.ಎನ್ ರವರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ದಿ:19/07/2024 ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ಪ್ರಕಾಶ್ ಜಿ.ಎನ್ ರವರಿಗೆ ಸಂಬಂದಿಸಿದಂತೆ 1 ಖಾಲಿ ನಿವೇಶನ, 2 ಮನೆಗಳು, 2.8 ಎಕರೆ ಕೃಷಿ ಜಮೀನು ಅಂದಾಜು ಸ್ಥಿರಾಸ್ಥಿ ಮೌಲ್ಯ ರೂ 1,57,00,000/- ಕಂಡು ಬಂದಿರುತ್ತದೆ. ಹಾಗೂ ಅವರ ವಾಸದ ಮನೆಯಲ್ಲಿ ರೂ 38,32,630/- ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 5,20,000/-ರೂ ಮೌಲ್ಯದ ವಾಹನಗಳು, ಅಂದಾಜು 11,30,000/-ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 12,86,500/- ನಗದು ಹಣ ಪತ್ತೆಯಾಗಿರುತ್ತದೆ.