ಚಿಕ್ಕಮಗಳೂರು ಪ್ರವಾಸಿಗರ ಗಮನಕ್ಕೆ..!
– ವಾಹನ ಸಂಚಾರ ಜುಲೈ 31ರ ತನಕ ನಿರ್ಬಂಧ
– ಜಿಲ್ಲಾಡಳಿತ ಮಾಹಿತಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಆದ್ದರಿಂದ ಇನ್ನೂ ಒಂದು ವಾರ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹಲವು ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.</p
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿರ್ಬಂಧವನ್ನು ಜುಲೈ 29ರ ತನಕ ನಿಷೇಧಿಸಲಾಗಿದೆ. ಮಳೆಯ ಜೊತೆಗೆ ಹಲವು ಕಡೆ ಗುಡ್ಡ ಕುಸಿದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸಲು ಲೋಕೋಪಯೋಗಿ ಇಲಾಖೆ ಕಾಲಾವಕಾಶವನ್ನು ಕೇಳಿದೆ. ಜಿಲ್ಲಾಡಳಿತ ತನ್ನ ಪ್ರಕಟಣೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಇನ್ನೂ ಮಳೆ ಬರುತ್ತಿರುವುದರಿಂದ ಹಾಗೂ ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಹೋಗುವ ರಸ್ತೆಗಳಲ್ಲಿ ದಿನಾಂಕ 31/07/2024ರ ತನಕ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ ಎಂದು ಹೇಳಿದೆ. ಸ್ಥಳೀಯ ನಿವಾಸಿಗಳ ವಾಹನಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನ, ಪೊಲೀಸ್ ವಾಹನಗಳು ಮತ್ತು ತುರ್ತು ಕಾರ್ಯ ನಿರ್ವಹಿಸುವ ಇತರೆ ಸರ್ಕಾರಿ ಇಲಾಖೆಗಳ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಆದೇಶದ ವಿವರಗಳು: ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯವರ ಕಾರ್ಯಾಲಯದ ಆದೇಶ ಚಿಕ್ಕಮಗಳೂರು ತಾಲೂಕು ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ದಿನಾಂಕ 15/07/2024ರಿಂದ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ-ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುತಿದ್ದು, ಈ ರಸ್ತೆಯ ಮೇಲೆ ಅಲ್ಲಲ್ಲಿ ಗುಡ್ಡ ಕುಸಿದಿರುತ್ತದೆ ಹಾಗೂ ಅತೀ ಮಳೆಯಿಂದಾಗಿ ರಸ್ತೆಗೆ ತೀವ್ರವಾದ ಹಾನಿಯಾಗಿರುತ್ತದೆ.
ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯಕಾರಿ ಯಾಗಿರುತ್ತದೆಯೆಂದೂ, ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವವರೆಗೆ ವಾಹನ ಸಂಚಾರವನ್ನು (ಅತೀ ಅವಶ್ಯಕ ವಾಹನಗಳನ್ನು ಹೊರತುಪಡಿಸಿ) ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಠಿಯಿಂದ ನಿರ್ಬಂಧಿಸಬೇಕೆಂದು ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು ಕೋರಿದ್ದಾರೆ.
ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವವರೆಗೆ ಅಂದರೆ ದಿನಾಂಕ 22/07/2024ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು ಪುನಃ ವರದಿ ಸಲ್ಲಿಸಿ, ಮಳೆ ಇನ್ನೂ ಬರುತ್ತಿರುವುದರಿಂದ ದುರಸ್ಥಿ ಕಾರ್ಯವನ್ನು ಕೈಗೊಳ್ಳಲು ಸಮಯ ಬೇಕಾಗಿರುವುದರಿಂದ ಸದರಿ ರಸ್ತೆಯಲ್ಲಿ ದಿನಾಂಕ 23/07/2024 ರಿಂದ 31/07/2024ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲು ಆದೇಶಿಸಬೇಕಾಗಿ ಕೋರಿರುತ್ತಾರೆ.