ಕರಾವಳಿ ಪ್ರಮುಖ ಸುದ್ದಿಗಳು
ರೈಲ್ವೆ ಹಳಿ ಮೇಲೆ ಬಿದ್ದ ಮರ: ಉಡುಪಿಯಲ್ಲಿ ತಪ್ಪಿದ ದುರಂತ!
– ಕಾರ್ಕಳ: ಹುಲ್ಲು ಕುಯ್ಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತ್ಯು
– ಬಂಟ್ವಾಳ: ಮಾಣಿ ಸಮೀಪದ ಬುಡೋಳಿಯಲ್ಲಿ ಯುವಕ ಆತ್ಮಹತ್ಯೆ
– ಮಣಿಪಾಲ ಸಮೀಪ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಸಾವು
NAMMUR EXPRESS NEWS
ಉಡುಪಿ: ಲೋಕೊ ಪೈಲಟ್ಗಳ ಸಮಯ ಪ್ರಜ್ಞೆಯಿಂದಾಗಿ ಇಂದು ಬೆಳಗ್ಗೆ ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ದೊಡ್ಡ ದುರಂತದಿಂದ ಪಾರಾಗಿರುವ ಘಟನೆ ಬಾರಕೂರು-ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ.ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9.18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರ ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್ ಗಳು ಬಹಳ ಹತ್ತಿರದಲ್ಲೇ ಗಮನಿಸಿದ್ದರು. ತಕ್ಷಣವೇ ಅವರು ಎಮರ್ಜೆನ್ಸಿ ಬ್ರೇಕ್ ಬಳಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದುವೇಳೆ ಹಳಿಯಲ್ಲಿ ಬಿದ್ದ ಮರ ಪೈಲಟ್ಗಳ ಗಮನಕ್ಕೆ ಬರುವುದು ಸ್ವಲ್ಪ ತಡವಾಗಿದ್ದರೂ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಒಎಚ್ಇ ತಂಡದವರು ಮರವನ್ನು ಹಳಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.ಸಕಾಲಿಕ ಕ್ರಮದಿಂದ ಅನಾಹುತವೊಂದು ತಪ್ಪಿಸಿದ ಲೋಕೊ ಪೈಲಟ್ ಹಾಗೂ ಸಹಾಯಕ ಪೈಲಟ್ಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ತಲಾ 15,000ರೂ. ಬಹುಮಾನವನ್ನು ಘೋಷಿಸಿದ್ದು, ಸುರತ್ಕಲ್ ನಿಲ್ದಾಣದಲ್ಲಿ ಬಹುಮಾನದ ಚೆಕ್ ಅನ್ನು ಹಸ್ತಾಂತರಿಸಲಾಯಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಕಾರ್ಕಳ: ಹುಲ್ಲು ಕುಯ್ಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತ್ಯು
ಪುತ್ತೂರು: ಹುಲ್ಲು ಕುಯ್ಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತ್ಯಪಟ್ಟಿರುವ ಘಟನೆ ಸವಣೂರಿನಲ್ಲಿ ನಡೆದಿದೆ. ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ದಿ. ಸುಬ್ಬಣ್ಣ ನಾಯ್ಕ ಅವರ ಪತ್ನಿ ಸೀತಾ ಮೃತ ದುರ್ದೈವಿ. ಜುಲೈ 23, ಮಂಗಳವಾರದಂದು ತಮ್ಮ ತೋಟದಲ್ಲಿ ಹುಲ್ಲು ಕುಯ್ಯುತ್ತಿದ್ದಾಗ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.
ಮಾಣಿ ಸಮೀಪದ ಬುಡೋಳಿಯಲ್ಲಿ ಯುವಕ ಆತ್ಮಹತ್ಯೆ!
ಬಂಟ್ವಾಳ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಶಾಂತ್ (25) ಮೃತ ಯುವಕ. ಸುಶಾಂತ್ ಅವರು ಮಿನಿ ಬಸ್ ಖರೀದಿಸಿ ಸ್ವಂತ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದರು. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಣಿಪಾಲ ಸಮೀಪ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ!
ಉಡುಪಿ: ಜಿಲ್ಲೆಯ ಮಣಿಪಾಲ ಸಮೀಪದ ಹಿರಿಯಡ್ಕ ಬಳಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯ ಉಪ್ಪರಿಗೆ ಮಾಡಿಗೆ ಚೂಡಿದಾರದ ಶಾಲು ಕಟ್ಟಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಪೆರ್ಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಯನ (17) ಆತ್ಮಹತ್ಯೆಗೆ ಶರಣಾದವಳು. ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.