ಕರಾವಳಿ ಕಡಲ ತೀರ ಪ್ರವಾಸೋದ್ಯಮಕ್ಕೆ ಪ್ಲಾನ್!
– ಕಡಲ ತೀರದ ದ.ಕ ಜಿಲ್ಲೆಯ ಸಾಮರ್ಥ್ಯ ಜಗತ್ತಿಗೆ ಪರಿಚಯಿಸಲು ಯೋಜನೆ
– ಕೇಂದ್ರ ಪ್ರವಾಸ ಸಚಿವರ ಜತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಚರ್ಚೆ
NAMMUR EXPRESS NEWS
ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಅದ್ಭುತ ತಾಣ ಮಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬಳಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.
‘ಸಸಿಹಿತ್ಲು ಬೀಚ್ನಲ್ಲಿ ಸಾಹಸ ಪ್ರವಾಸೋದ್ಯಮವನ್ನು ಪರಿಚಯಿಸಬೇಕು ಹಾಗೂ ಭಾರತದಲ್ಲಿ ಪ್ರಥಮ ವಿಶ್ವ ಮಟ್ಟದ ಪ್ಯಾಡ್ಲಿಂಗ್ ಸ್ಪರ್ಧೆ ಆಯೋಜನೆಗೊಂಡ ಸಸಿಹಿತ್ಲು ಬೀಚ್ಗೆ ಬ್ಲೂ ಫ್ಲ್ಯಾಗ್ ಪ್ರಮಾಣೀಕರಣ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ‘ಯುವ ಪ್ರವಾಸೋದ್ಯಮ ಕ್ಲಬ್’ಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕು’. ಇದರ ಕುರಿತು ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸಂಸದರು ಸಚಿವರ ಬಳಿ ಮನವಿ ಮಾಡಿದ್ದಾರೆ.
ಪಶ್ಚಿಮ ಘಟ್ಟ, ಸುಂದರವಾದ ಕಡಲತೀರ, ಹೆಸರಾಂತ ಧಾರ್ಮಿಕ ಕೇಂದ್ರಗಳು, ವರ್ಷದ ಉದ್ದಕ್ಕೂ ನಾನಾ ರೀತಿಯ ಆಚರಣೆಗಳು, ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ತಾಣಗಳು ಹೀಗೆ ವಿಶಿಷ್ಠವಾದ ನೈಸರ್ಗಿಕ ಸೌಂದರ್ಯವನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯು ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತನೆಗೊಳ್ಳುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಇದನ್ನು ಸಾಧಿಸಲು ಸಚಿವರ ಬೆಂಬಲವನ್ನು ಸಂಸದರು ಕೋರಿದ್ದಾರೆ.