ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ರೌದ್ರಾವತಾರ!
– ಎಲ್ಲಾ ಕಡೆ ಧರೆ, ರಸ್ತೆ ಕುಸಿತ: ಮರ, ಕಂಬ ಬಿದ್ದು ಹಾನಿ
– ಮೂಡಿಗೆರೆ : ಮರ ಬಿದ್ದು ಎರಡು ಕಾರುಗಳು ಜಖಂ
– ವಾರದಿಂದ ಕತ್ತಲೆಯಲ್ಲಿ ಮುಳುಗಿದ ಊರುಗಳು!
– ನಾಳೆಯೂ ರಜೆ ಮುಂದುವರಿಯುವ ಸಾಧ್ಯತೆ!?
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎಲ್ಲೆಡೆ ಭೂಕುಸಿತ ಮರ ಬಿದ್ದು ಹಾನಿ ಉಂಟಾದ ಘಟನೆಗಳು ವರದಿಯಾಗಿವೆ. ಇನ್ನು ಪ್ರತಿ ಊರಲ್ಲೂ ವಿದ್ಯುತ್, ನೆಟ್ವರ್ಕ್ ಇಲ್ಲದೆ ಊರುಗಳು ಕತ್ತಲೆಯಲ್ಲಿ ಮುಳುಗಿದೆ.
ಬಾಳೆಹೊನ್ನೂರು ಭಾಗದಲ್ಲಿ ಮನೆ ಮೇಲೆ ಮರ ಬಿದ್ದಿದ್ದು ಹಲವಡೆ ಭೂಕುಸಿತ ಸಂಭವಿಸಿದೆ, ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಶೃಂಗೇರಿ ತಾಲೂಕಲ್ಲಿ ಅಪಾರ ಹಾನಿ
ಶೃಂಗೇರಿ ತಾಲೂಕಿನ ಆನೆಗುಂದ ಸಮೀಪ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ವೇಳೆ ತೆರೆವುಗೊಳಿಸಿದ್ದ ರಸ್ತೆಬದಿಯ ಗುಡ್ಡ ದಿನೇ ದಿನೇ ಕುಸಿಯುತ್ತಿದ್ದು ರಸ್ತೆ ಎದುರೇ ತುಂಗಾ ನದಿ ಇದ್ದು ಅಪಾಯದ ಮುನ್ಸೂಚನೆ ನೀಡಿದೆ. ಇದೇ ಮಾರ್ಗವಾಗಿ ದಿನವೂ ಸಾವಿರಾರು ವಾಹನಗಳು, ಪ್ರಯಾಣಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕಿದೆ.
ಎಲ್ಲಾ ತಾಲೂಕಲ್ಲೂ ಮರ, ವಿದ್ಯುತ್ ಕಂಬ ಧರೆಗೆ
ಇನ್ನೊಂದಡೆ ಜಿಲ್ಲೆಯಾದ್ಯಂತ ಭಾರಿ ಗಾಳಿಗೆ ಅನೇಕ ಮರಗಳು ಧರೆಗುರುಳಿದ್ದು ಅನೇಕ ಮರಗಳು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ ಇನ್ನು ಹಲವೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಬಾಳೆಹೊನ್ನೂರು, ಜೈಪುರ, ಶೃಂಗೇರಿ, ಕೊಪ್ಪ, ಎನ್ ಆರ್ ಪುರ, ಬಸರಿಕಟ್ಟೆ, ಕಳಸ ಭಾಗದಲ್ಲಿ ಕಳೆದ ಐದು ದಿನಗಳಿಂದ ನಗರ ಪ್ರದೇಶಗಳು ಸೇರಿದಂತೆ ಎಲ್ಲಾ ಹಳ್ಳಿಗಳಲ್ಲೂ ವಿದ್ಯುಸಂಪರ್ಕವಿಲ್ಲದೆ ಜನಸಾಮಾನ್ಯರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ.
ಮೆಸ್ಕಾಂ ಸಿಬ್ಬಂದಿಗಳು ಹಗಲಿರುಳು ಶ್ರಮ
ವಿದ್ಯುತ್ ಸಮಸ್ಯೆ ಸರಿಪಡಿಸಲು ಮೆಸ್ಕಾಂ ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುತ್ತಿದ್ದು ಒಂದರ ನಂತರ ಒಂದರಂತೆ ಮರಗಳು ವಿದ್ಯುತ್ ಲೈನ್ ಮೇಲೆ ಬೀಳುತ್ತಿದ್ದು ತುಂಬಾ ತೊಂದರೆಯಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಕಛೇರಿಗಳಲ್ಲಿ ಕಂಪ್ಯೂಟರ್ಗಳಿಲ್ಲದೆ ಯಾವುದೇ ಕೆಲಸಗಳಾಗುತ್ತಿಲ್ಲ. ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು ಮತ್ತೆ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಗಾಳಿಯ ರಭಸವು ಹೆಚ್ಚಾಗಿದ್ದು ಜಿಲ್ಲೆಯ ಎಲ್ಲ ತಾಲೂಕುಗಳ ಶಾಲೆ, ಅಂಗನವಾಡಿಗಳಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ.
ಮೂಡಿಗೆರೆ : ಮರ ಬಿದ್ದು ಎರಡು ಕಾರುಗಳು ಜಖಂ
ಮೂಡಿಗೆರೆ: ಮಲೆನಾಡಿನಲ್ಲಿ ಕಳೆದ 15 ದಿನಗಳಿಂದ ಸತತ ಮಳೆ ಸುರಿಯುತ್ತಿದೆ. ಈ ಮಳೆಗೆ ಅಲ್ಲಲ್ಲಿ ಸಾಕಷ್ಟು ಅವಾಂತರಗಳೂ ಸೃಷ್ಟಿಯಾಗಿವೆ. ಈ ನಡುವೆ ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊ೦ದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮರ ಉರುಳುವ ವೇಳೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎರಡು ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಚಿಕ್ಕಮಗಳೂರು ಹೊರವಲಯದ ಗವನಹಳ್ಳಿ ಬಳಿ ಘಟನೆ ನಡೆದಿದೆ. ಕಡೂರು-ಮಂಗಳೂರು ಹೆದ್ದಾರಿಯಲ್ಲಿ ಈ ಘಟನೆಯಿ೦ದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಕಾರಿನಲ್ಲಿದ್ದವರಿಗೆ ದೊಡ್ಡ ಮಟ್ಟದ ಹಾನಿಯಾಗುವ ಸ೦ಭವವಿತ್ತು ಎನ್ನಲಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.