ಕರಾವಳಿ ಟಾಪ್ 5 ನ್ಯೂಸ್
– ಮಂಗಳೂರು: ಗಂಡನಿಗೆ ಮೆಸೇಜ್ ಮಾಡಿ ಹೆಂಡತಿ ನಾಪತ್ತೆ.!
– ಕಾಸರಗೋಡು: ಆತ್ಮಹತ್ಯೆ ವೇಳೆ ತುಂಡಾದ ಹಗ್ಗ: ಮಹಿಳೆ ಸಾವು
– ಕಾಪು: ಬಾಲ್ಯ ವಿವಾಹ : ಪತಿ, ಹೆತ್ತವರ ವಿರುದ್ಧ ಕೇಸ್
– ಸುರತ್ಕಲ್: ಕಾರ್ಗೊ ಶಿಪ್ಗೆ ಬೆಂಕಿ,, ತೈಲ ಸೋರಿಕೆ ಭೀತಿ
– ಆವರ್ಸೆ: ಬಸ್ ಡಿಕ್ಕಿಯಾಗಿ ಗಾಯಗೊಂಡ ಕಾಡುಕೋಣ
NAMMUR EXPRESS NEWS
ಮಂಗಳೂರು: ನಗರದ ಕಾಲೇಜೊಂದರಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದ ಮಂಗಳಾದೇವಿ ನಿವಾಸಿ ಯುವತಿಯೋರ್ವಳು ತನ್ನ ಪತಿಗೆ ತಾನು ಮತ್ತೊಬ್ಬನೊಂದಿಗೆ ಹೋಗುತ್ತಿದ್ದೇನೆ ಎಂದು ವಾಟ್ಸಾಪ್ ಮೆಸೇಜ್ ಮಾಡಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಿಯಾ ರಂಜಿತ್ (25) ನಾಪತ್ತೆಯಾದ ಯುವತಿ. ಪ್ರಿಯಾ ರಂಜಿತ್ ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜುಲೈ 17ರಂದು ಬೆಳಗ್ಗೆ 7:45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಆದರೆ ಸಂಜೆ 5 ಗಂಟೆಗೆ ತಾನು ಅಮಿತ್ ಎಂಬಾತನೊಂದಿಗೆ ಹೋಗುತ್ತಿದ್ದೇನೆ. ತಾಯಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಪತಿಯ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆ. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೀಗ ಅವರು ನಾಪತ್ತೆಯಾಗಿದ್ದಾರೆ. ಎಡಕೈಯಲ್ಲಿ ರಂಜಿತ್ ಎಂಬ ಹೆಸರಿನ ಟ್ಯಾಟೋ, ಬಲಕೈಯಲ್ಲಿ ಬಟರ್ ಫೈ ಟ್ಯಾಟೋ, ಮೂಗಿನ ಕೆಳಗೆ ಕಪ್ಪು ಮಚ್ಚೆ ಇದೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ವೇಳೆ ತುಂಡಾದ ಹಗ್ಗ: ಗಾಯಗೊಂಡ ಮಹಿಳೆ ಮೃತ್ಯು!
ಕಾಸರಗೋಡು: ಆತ್ಮಹತ್ಯೆ ಮಾಡಲೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ವರದಿಯಾಗಿದೆ. ಕುಂಬಳೆ ಸಮೀಪದ ಬಂದ್ಯೋಡು ಅಡ್ಕ ಒಳಯಂ ರೋಡ್ ನಿವಾಸಿ ದಿ. ಮೂಸ ಎಂಬವರ ಪುತ್ರಿ ಆಯಿಶತ್ ರಿಯಾನ (24) ಮೃತಪಟ್ಟವರು. ಜು. 23ರಂದು ತಾಯಿ ಮನೆಯ ಬಾತ್ರೂಂನಲ್ಲಿ ಆಯಿಶತ್ ರಿಯಾನ ನೇಣು ಬಿಗಿದು ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದಾರೆ. ಈ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ದೇರಳಕಟ್ಟೆ ಆಸ್ಪತ್ರೆಯಲ್ಲಿ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.25 ರ ಮುಂಜಾನೆ ರಿಯಾನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಬಾಲ್ಯ ವಿವಾಹ – ಪತಿ, ಹೆತ್ತವರ ವಿರುದ್ಧ ಪೋಕ್ಸ ಪ್ರಕರಣ ದಾಖಲು.!
ಕಾಪು: ಬಾಲಕಿಯನ್ನು ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣನಾದ ಪತಿ ಮತ್ತು ಆತನ ಮನೆಯವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ಘಟನೆ ನಡೆದಿದೆ.
ಬಿಹಾರ ಮೂಲದ ಚಾಂದನಿ ಕಾತೂನ್ ದೂರುದಾರ ಮಹಿಳೆ. ಆಕೆ ಪತಿ ಇನಿಂಯಾಜ್ ದೇವನ್ ಹಾಗೂ ಮದುವೆಗೆ ಕಾರಣರಾಗಿದ್ದ ತನ್ನ ತಂದೆ ಮೊಹಮ್ಮದ್ ತಯ್ಯಬ್ ರಾಯಿನ್ ಮತ್ತು ತಾಯಿ ಜುಲೇಖಾ ಖಾತೂನ್ ವಿರುದ್ಧ ದೂರು ನೀಡಿದ್ದಾರೆ.ಚಾಂದನಿಗೆ 16 ವರ್ಷ ತುಂಬಿದ್ದ ವೇಳೆ 2022 ಜೂ. 12ರಂದು ಇನಿಂಯಾಜ್ನೊಂದಿಗೆ ಹೆತ್ತವರು ವಿವಾಹ ಮಾಡಿಕೊಟ್ಟಿದ್ದು, ಅನಂತರ ಪತಿಯ ಮನೆಯಲ್ಲಿ ವಾಸವಿದ್ದರು. ಆ ಬಳಿಕ 2023 ಎ. 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅನಂತರ ಮಗುವಿನೊಂದಿಗೆ ದಂಪತಿ ಉದ್ಯಾವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಚಾಂದನಿ ಮತ್ತೆ ಗರ್ಭಿಣಿಯಾಗಿದ್ದರು. ಜು.13ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಕಾರ್ಗೊ ಶಿಪ್ಗೆ ಬೆಂಕಿ; ಕಡಲತೀರದಲ್ಲಿ ಕಟ್ಟೆಚ್ಚರ
ಸುರತ್ಕಲ್ : ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಪ್ರಸ್ತುತ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದರೂ, ಅಪಾಯಕಾರಿ ಸ್ಥಿತಿಯಲ್ಲಿ ಈ ಹಡಗು ಸುರತ್ಕಲ್ನಿಂದ 33 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದೆ ಎಂದು ತಿಳಿದುಬಂದಿದೆ. ಗುಜರಾತ್ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದರೂ, ಅಪಾಯಕಾರಿ ಸ್ಥಿತಿಯಲ್ಲಿದ್ದ ಹಡಗನ್ನು ಕರ್ನಾಟಕದ ಕರಾವಳಿಯ ಸಮುದ್ರದಲ್ಲಿ ಲಂಗರು ಹಾಕಲಾಗಿದ್ದು ಭಯ ನಿರ್ಮಿಸಿದೆ.
ಸದ್ಯಕ್ಕೆ ಈ ಹಡಗು ಮಂಗಳೂರಿನ ಎನ್ಎಂಪಿಟಿಗೆ ಸಮೀಪದಲ್ಲಿರುವಂತೆ ಸುರತ್ಕಲ್ ಬಳಿ ನಡು ಸಮುದ್ರದಲ್ಲಿ ನಿಂತಿದೆ. ಸದ್ಯಕ್ಕೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಇದರಿಂದ ಹಡಗು ಸಂಪೂರ್ಣ ಹಾನಿಗೊಂಡು ಮುಳುಗುವ ಹಾಗೂ ಅದರಲ್ಲಿರುವ ತೈಲ ಸೋರಿಕೆಯಾಗಿ ಸಮುದ್ರ ಸೇರುವ ಅಪಾಯ ಇರುವುದರಿಂದ ಸಮುದ್ರ ಮಾಲಿನ್ಯವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ವ್ಯಾಪಿಸುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಮಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹಾಗೂ ಮಲ್ಪೆ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್ ತಿಳಿಸಿದ್ದಾರೆ. ಪನಾಮಾ ದೇಶದ ಫ್ಲಾಗ್ನ್ನು ಹೊಂದಿರುವ ಎಂವಿ ಎಂ.ಫ್ರಾಂಕ್ಫರ್ಟ್ ಕಾರ್ಗೋ ಕಂಟೈನರ್ ಹಡಗು ತೈಲ ಹಾಗೂ ದಹನಕಾರಿ ವಸ್ತುಗಳನ್ನು ಹೇರಿಕೊಂಡು ಮುಂದ್ರಾ ಬಂದರಿನಿಂದ ಹೊರಟಿದ್ದು, ಗೋವಾದಿಂದ ಕಾರವಾರದತ್ತ ಬರುತ್ತಿದ್ದಾಗ ಜು.19ರಂದು ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಹಿತಿ ಸಿಕ್ಕಿದ ತಕ್ಷಣವೇ ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಹಡಗಿನ ಬೆಂಕಿಯನ್ನು ನಂದಿಸಲು ರಕ್ಷಣಾ ಹಡಗು ಹಾಗೂ ಹೆಲಿಕಾಪ್ಟರ್ಗಳನ್ನು ಬಳಸಿದ್ದು, ಅವು ಸತತ 40 ಗಂಟೆಗಳ ಕಾಲ ಹೋರಾಡಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಈ ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿಗಳಿದ್ದು, ಇವರಲ್ಲಿ ಒಬ್ಬ ದುರಂತದಲ್ಲಿ ಸಾವನ್ನಪ್ಪಿರುವ ಅಥವಾ ಕಣ್ಮರೆಯಾಗಿರುವ ಮಾಹಿತಿ ಇದೆ ಎಂದು ಮಿಥುನ್ ತಿಳಿಸಿದ್ದಾರೆ.
ಆವರ್ಸೆ: ಬಸ್ ಡಿಕ್ಕಿಯಾಗಿ ಗಾಯಗೊಂಡ ಕಾಡುಕೋಣ!
ಉಡುಪಿ: ಕಾಡು ಕೋಣವೊಂದು ಬಸ್ ಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಆವರ್ಸೆ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ. ರಸ್ತೆ ದಾಟುವ ಧಾವಂತದಲ್ಲಿ ಕಾಡುಕೋಣ ಬಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾಡುಕೋಣ ಗಂಭೀರವಾಗಿ ಗಾಯಗೊಂಡಿದ್ದು, ಕೆಲಹೊತ್ತು ಅಡ್ಡಾದಿಡ್ಡಿಯಾಗಿ ಓಡಾಡಿದೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಅರವಳಿಕೆ ತಜ್ಞರು ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಪಶು ಆರೈಕೆ ಕೇಂದ್ರಕ್ಕೆ ಸಾಗಿಸಲಾಯಿತು.