ಕರಾವಳಿ ಟಾಪ್ 4 ನ್ಯೂಸ್..!
– ಕಂಬಳ ಕ್ಷೇತ್ರದಲ್ಲಿ ಹಲವು ಪದಕ ಗೆದ್ದಿದ್ದ ನಾಗು ಕೋಣ ಇನ್ನಿಲ್ಲ!
– ಸುರತ್ಕಲ್ : ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ
– ಅಲೂರು: ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ
– 6ನೇ ದಿನಕ್ಕೆ ಕಾಲಿಟ್ಟ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ
NAMMUR EXPRESS NEWS
ಮಣಿಪಾಲ: ವಾರದ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಲಕ್ಕಿಯ ಅಗಲುವಿಕೆಯಿಂದ ಬೇಸರಗೊಂಡಿದ್ದ ಕಂಬಳಾಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಶನಿವಾರ ಅಸುನೀಗಿದೆ.
ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ನಾಗು ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಹಲಗೆ ಸೀನಿಯರ್ ವಿಭಾಗಕ್ಕೆ ಎಂಟ್ರಿ ನೀಡಿದ್ದ ನಾಗು ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಬೈಂದೂರಿನಿಂದ ಎಲ್ಲರೂ ಬಂಢಾರಮನೆ ಸೇರಿದ್ದ ನಾಗು, ಬಳಿಕ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು. ಕೂಟಗಳಲ್ಲಿ ಸಕ್ರಿಯವಾಗಿದ್ದ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ.
ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ!
ದಕ್ಷಿಣ ಕನ್ನಡ: ಕರ್ನಾಟಕದ ಹಲವೆಡೆ ವರುಣಾರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಕರಾವಳಿ ಭಾಗಗಳಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನ ಕಾಟಿಪಳ್ಳ, ಕೃಷ್ಣಾಪುರ ಭಾಗದಲ್ಲಿ ಮಳೆಯ ಜೊತೆಗೆ ಸುಂಟರಗಾಳಿ ಬೀಸಿದ್ದು, ಮನೆಯ ಮೇಲ್ಪಾವಣಿ ಹಾರಿಹೋಗಿದೆ. ಜೊತೆಗೆ ವಿದ್ಯುತ್ ಕಂಬ ಹಾಗೂ ಬೃಹತ್ ಮರಗಳು ಧರೆಗೆ ಉರುಳಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಇನ್ನು ಭಯಾನಕ ಸುಂಟರಗಾಳಿಯ ದೃಶ್ಯ, ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಭಾರಿ ಮಳೆಯಿಂದಾಗಿ ಮಂಗಳೂರು ಬಳಿ ಮನೆ ಕುಸಿತವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದುರಂತ ತಪ್ಪಿದೆ.
ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ
ಅಲೂರು: ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿಕೊಪ್ಪಲು ಗ್ರಾಮದಿಂದ ದೇವರಾಜನಹಳ್ಳಿ ಮಾರ್ಗವಾಗಿ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು, ವಾಹನಗಳು ಸಂಚರಿಸಲು ಪರದಾಡುವಂತಾಗಿದೆ. ಗಂಜಿಗೆರೆ, ಗರಿಗಟ್ಟ, ಕ್ಯಾತನಳ್ಳಿ ಕಾಲೊನಿ, ತಟ್ಟೆಕೆರೆ, ಬಸವನಹಳ್ಳಿ, ಕಾಳಶೆಟ್ಟಿ ಬೀಡು ಸೇರಿದಂತೆ ಸುಮಾರು 18 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಜನರು ಓಡಾಡುತ್ತಾರೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಹದಗೆಟ್ಟಿರುವ ರಸ್ತೆಯಲ್ಲಿ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೊಂಡ, ಗುಂಡಿಗಳನ್ನು ತಪ್ಪಿಸಿಕೊಂಡು ಮುಂದೆ ಹೋಗಲು ಹರಸಾಹಸ ಪಡಬೇಕು. ಸುಮಾರು ಐದಾರು ಕಿ.ಮೀ. ಇರುವ ಈ ಮಣ್ಣು ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಮತ್ತು ವಾಹನಗಳು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಜನಸಾಮಾನ್ಯರು ಓಡಾಡುವ ಸಂದರ್ಭ, ಪಕ್ಕದಲ್ಲಿ ವಾಹನಗಳು ಹಾಯ್ದು ಹೋದರೆ ಕೆಸರು ನೀರು ಮೈಮೇಲೆ ಹಾರುತ್ತಿರುವುದರಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಜನರು ದೂರುತ್ತಿದ್ದಾರೆ.
6ನೇ ದಿನಕ್ಕೆ ಕಾಲಿಟ್ಟ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ!
ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಇದರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ. ಮಳೆಯ ಮಧ್ಯೆಯೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗ ಸಮುದಾಯದ ಮಕ್ಕಳು, ಮಹಿಳೆಯರು, ವೃದ್ಧರು ಧರಣಿ ನಡೆಸುತ್ತಿದ್ದು, ಅಲ್ಲೇ ಮಧ್ಯಾಹ್ನ, ರಾತ್ರಿಯ ಅಡುಗೆಯನ್ನು ತಯಾರಿಸಿ, ಊಟ ಮಾಡಿ ಧರಣಿಯನ್ನು ಮುಂದುವರೆಸಿದ್ದಾರೆ. ಸುಮಾರು 100 ಮಂದಿ ರಾತ್ರಿ ವೇಳೆ ಧರಣಿ ಸ್ಥಳದಲ್ಲಿ ಉಳಿದುಕೊಂಡು ತಮ್ಮ ಹೋರಾಟ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸುವವರೆಗೆ ಹೋರಾಟ ಮುಂದುವರೆಸಲಾಗುವುದು. ನಮಗೆ ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಮುಖ್ಯಮಂತ್ರಿ ಜೊತೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವೆ ಸ್ಥಳಕ್ಕೆ ಬರಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ಒತ್ತಾಯಿಸಿದ್ದಾರೆ.