ಕರಾವಳಿ ನ್ಯೂಸ್
ಕುಂದಾಪುರದಲ್ಲಿ ಕಳ್ಳರ ಗ್ಯಾಂಗ್!?
– ಪೊಲೀಸ್ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಲ್ಲಿ ಕಳ್ಳತನಕ್ಕೆ ಯತ್ನ
– ಬೆಳ್ತಂಗಡಿ: ಕೌಟುಂಬಿಕ ಕಲಹ: ಪತ್ನಿಗೆ ಚೂರಿಯಿಂದ ಇರಿದ ಪತಿ!
– ಪುತ್ತೂರು: ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡಿದ ಆರೋಪಿ ಪೊಲೀಸ್ ಕಸ್ಟಡಿಗೆ
– ಪುತ್ತೂರು; ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದಾತ ಅರೆಸ್ಟ್
NAMMUR EXPRESS NEWS
ಕುಂದಾಪುರ: ಕರಾವಳಿಯಲ್ಲಿ ಚಡ್ಡಿ ಗ್ಯಾಂಗ್ ಬಳಿಕ ಈಗ ಮತ್ತೊಂದು ಗ್ಯಾಂಗ್ ಕಳ್ಳತನಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ.ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಕುಂದಾಪುರ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬಂದ ಅಪರಿಚಿತರ ತಂಡವೊಂದು ಅನುಮಾನಾಸ್ಪದವಾಗಿ ಓಡಾಡಿ ಭಯ ಹುಟ್ಟಿಸಿದೆ.ಈ ಬಗ್ಗೆ ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಅವರು ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ದೂರಿನಲ್ಲಿ ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ.
ಈ ಮಧ್ಯೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿದರು. ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಅಪರಿಚಿತರು ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ತೆರಳಿರುವುದಾಗಿ ಉಲ್ಲೇಖಿಸಿದ್ದಾರೆ.
ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡಿದವನ ಬಂಧನ
ಪುತ್ತೂರು: ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿ ಅಬ್ದುಲ್ ರಹಿಮಾನ್ (41) ಎಂಬಾತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಸ್ಥಳೀಯ ಉದ್ಯಮಿ, ಆರೋಪಿ ಅಬ್ದುಲ್ ರಹಿಮಾನ್ ಜುಲೈ 21 ರಂದು ರಾತ್ರಿ 9 ಗಂಟೆ ಸುಮಾರಿಗೆ ಸ್ನಾನ ಮಾಡುತ್ತಿದ್ದ 22 ವರ್ಷದ ಮಹಿಳೆಯನ್ನು ಇಣುಕಿ ನೋಡಿದ್ದಾನೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದು, ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪ್ರಕರಣದ ವಿಚಾರಣೆ ವೇಳೆ ಆರೋಪಿ ಅಬ್ದುಲ್ ರಹಿಮಾನ್ ಪಿರಿಯಡ್ಕ ಸುತ್ತಮುತ್ತಲಿನ ಮಹಿಳೆಯರಿಗೆ ಮನೆಯ ಹಿಂಬಾಗಿಲಿನ ಮೂಲಕ ಒಳ ನುಗ್ಗಿ ಅವರಿಗೆ ನಿದ್ದೆಯಲ್ಲಿದ್ದಾಗಲೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಬೆಳ್ತಂಗಡಿ: ಕೌಟುಂಬಿಕ ಕಲಹ: ಪತ್ನಿಗೆ ಚೂರಿಯಿಂದ ಇರಿದ ಪತಿ!
ಬೆಳ್ತಂಗಡಿ: ಕೌಟುಂಬಿಕ ಕಲಹದಿಂದಾಗಿ ಪತ್ನಿಗೆ ಪತಿ ಚೂರಿಯಿಂದ ಇರಿದ ಘಟನೆ ಬೆಳ್ತಂಗಡಿ ಗ್ರಾಮದ ಕಣಿಯಾರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದೆ.ಜೋರುಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಜರಾ (40) ಇರಿತಕ್ಕೆ ಒಳಗಾದ ಮಹಿಳೆ.ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಚೂಕುವಿನಿಂದ ಇರಿದ ಪತಿ. ಹಕೀಂ ಅವರನ್ನು ಸಜರಾ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ವಿವಾಹವಾದ ಕೆಲ ವರ್ಷಗಳ ಬಳಿಕ ಹಕೀಂ ಸಜರಾ ಅವರಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸಜರಾ ಅವರು ಕಳೆದ ಮೂರು ವರ್ಷಗಳಿಂದ ಜೋರುಕಟ್ಟೆಯಲ್ಲಿರುವ ತನ್ನ ತವರು ಮನೆಗೆ ಬಂದು ಮಕ್ಕಳೊಂದಿಗೆ ನೆಲೆಸಿದ್ದರು. ಶುಕ್ರವಾರ ಮಧ್ಯಾಹ್ನ ವೇಳೆ ಚೂರಿ ಹಿಡಿದುಕೊಂಡು ಬಂದಿದ್ದ ಹಕೀಂ ಏಕಾಏಕಿಯಾಗಿ ಸಜರಾ ಅವರ ಮೇಲೆ ಹಲ್ಲೆ ನಡೆಸಿ, ತಡೆಯಲು ಬಂದ ತಂದೆ ಮಹಮ್ಮದ್ ಅವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ.ಹಲ್ಲೆ ನಡೆಸಿ ಪರಾರಿಯಾದ ಹಕೀಂನನ್ನು ಮನೆಮಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಕೈ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿರುವ ಸಜರಾ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು; ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದಾತ ಅರೆಸ್ಟ್’!
ಪುತ್ತೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದಾತ ಅರೆಸ್ಟ್ ಆಗಿರುವ ಘಟನೆ ಪುತ್ತೂರಿನ ಬನ್ನೂರಿನಲ್ಲಿ ನಡೆದಿದೆ. ತೇಜಸ್ ಬಂಧಿತ ಆರೋಪಿ. ಬನ್ನೂರಿನಲ್ಲಿ ತಾಯಿ ಮಗನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಚಾರಣೆಗೆಂದು ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯ ತಾಯಿ ಚಂದ್ರಾವತಿ ಅವರನ್ನು ಮನೆಯಲ್ಲಾದ ಗಲಾಟೆಯ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ.ಆಗ ಮನೆಯ ಒಳಗಿನಿಂದ ಬಂದ ಆರೋಪಿ ತೇಜಸ್ ಪೊಲೀಸರು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಎಂದು ಅವ್ಯಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ ಪೊಲೀಸರ ಕಾರಿಗೆ ಮನೆಯಲ್ಲಿದ್ದ ಒಂದು ಕಾರನ್ನ ಅಡ್ಡವಾಗಿ ಇಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.