ಬೆಂಗಳೂರು ಟಾಪ್ 4 ನ್ಯೂಸ್..!
– ವಿಡಿಯೊ ಮಾಡುತ್ತಲೆ ನೇಣು ಹಾಕಿಕೊಂಡ ವಿವಾಹಿತ ಮಹಿಳೆ!
– ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ!
– ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್
– ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು!
NAMMUR EXPRESS NEWS
ಬೆಂಗಳೂರು: ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಲೈವ್ ವಿಡಿಯೊ ಮಾಡಿಟ್ಟುಕೊಂಡು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆಡಿದೆ. ಮಾನಸ(25)ಆತ್ಮಹತ್ಯೆ ಮಾಡಿಕೊಂಡು ಮಹಿಳೆ. ಮಾನಸ 6 ವರ್ಷದ ಹಿಂದೆ ದಿಲೀಪ್ ಎಂಬುವನ ಜತೆ ವಿವಾಹವಾಗಿದ್ದರು ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗು ಇದೆ. ಆದರೆ, ದಿಲೀಪ್ ಒಂದೂವರೆ ವರ್ಷದಿಂದ ಬೇರೊಂದು ಮಹಿಳೆ ಸಹವಾಸ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಪತಿ ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಬೇಸತ್ತ ಮಾನಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸ ಅಂದ್ರಹಳ್ಳಿ ಗಂಡನ ಮನೆಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಬಳಿಕ ದಿಲೀಪ್ ಮನೆಯವರ ವಿರುದ್ಧ ಮಾನಸ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ. ಠಾಣೆ ಮುಂಭಾಗವೇ ಗಂಡನ ಕಡೆಯವರಿಗೆ ಹಲ್ಲೆ ನಡೆಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ!
ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಕಸದ ಲಾರಿ ಮತ್ತೆರಡು ಬಲಿ ಪಡೆದುಕೊಂಡಿದೆ. ನಗರದ ಹೃದಯ ಭಾಗದ ಕೆಆರ್ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್ನಲ್ಲಿ ಕೆಲಸ ಮಾಡುತ್ತಿದ್ದರು. ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದು, ಆಸ್ಪತ್ರೆಯಲ್ಲಿ ಪ್ರಶಾಂತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿ ವಾಹನ ಅಪಘಾತ ಆಗಿದೆ. ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ. ಮೊದಲು ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ನಮಗೆ ನ್ಯಾಯ ಬೇಕಾಗಿದೆ. ಅಪಘಾತ ಮಾಡಿದ ಚಾಲಕನ ಬಂಧನ ಆಗಬೇಕು. ನ್ಯಾಯ ಸಿಗದಿದ್ದರೆ ನಾನು ನನ್ನ ಪತ್ನಿ ಮತ್ತು ಮಗಳು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ತವೆ. ನನ್ನ ಮಗ ಮಾರ್ಥಾಸ್ ಆಸ್ಪತ್ರೆಯಲ್ಲಿಯೇ ಜನಿಸಿದ್ದ. ಇದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಮೃತ ಪ್ರಶಾಂತ್ ತಂದೆ ಲೋಕೇಶ್ ಹೇಳಿದ್ದಾರೆ.
ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್!
ಬೆಂಗಳೂರು: ಶಿರಾಡಿ ಘಾಟಿಯಲ್ಲಿ ರೈಲ್ವೇ ಹಳಿ ಮೇಲೆ ಭಾರಿ ಭೂಕುಸಿತ ಆಗಿರುವ ಪರಿಣಾಮ ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲುಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ. ಆಗಸ್ಟ್ 10ರವರೆಗೆ ಇಲ್ಲಿ ರೈಲು ಸಂಚಾರ ಇರುವುದಿಲ್ಲ. ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಅದರೆ ಕಾಮಗಾರಿಗೆ ಭಾರಿ ಮಳೆ ಅಡ್ಡಿಯಾಗಿದೆ. ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು ಮಂಗಳೂರು ನಡುವಿನ ಫೈಟ್ ಟಿಕೇಟ್ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಇರುತ್ತಿದ್ದ 3000- 3500 ರೂ. ದರ ಇದೀಗ 6604 ರೂಪಾಯಿಗೆ ಏರಿಕೆಯಾಗಿದೆ. ಎಡಕುಮೇರಿ- ಕಡಗರವಳ್ಳಿ ನಡುವಿನ ದೋಣಿಗಲ್ನಲ್ಲಿ ಉಂಟಾಗಿರುವ ಗಂಭೀರ ಸ್ವರೂಪದ ಭೂಕುಸಿತದಿಂದ ಹಾನಿಗೀಡಾಗಿರುವ ರೈಲು ಮಾರ್ಗದ ದುರಸ್ತಿ ಕಾರ್ಯ ಹಗಲು ರಾತ್ರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿರಂತರ ಮಳೆಯ ಸವಾಲಿನ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅಗತ್ಯ ಸಲಕರಣೆಗಳೊಂದಿಗೆ ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿತ್ತು. ಆರು ಹಿಟಾಚಿ ಯಂತ್ರಗಳು, ಐದು ಪೋನ್ ಯಂತ್ರಗಳೂ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ತಡೆದಿಡುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಲಾಗುತ್ತಿದೆ. ಅದಕ್ಕೆ ಕಬ್ಬಿಣದ ನೆಟ್ (ಗೇಬಿಯನ್ ಮೆಷ್ ಮೂಲಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್ವರ್ಕ್, ಇಂಟರ್ನೆಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್ಗಳು, ಕಂಟ್ರೋಲ್ ಫೋನ್, ಸ್ಯಾಟಲೈಟ್ ಫೋನ್, ವಿಎಸ್ಟಿಎ ಸಂವಹನ (ಲೈವ್ ಸ್ಟ್ರೀಮಿಂಗ್ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್ ರೂಮ್ನಿಂದ ಸಂವಹನ ನಡೆಸಲಾಗುತ್ತಿದೆ.
ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ!
ಆನೇಕಲ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾರು ಚಲಾಯಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಜಿಗಣಿ- ಬೆಂಗಳೂರು ಮುಖ್ಯರಸ್ತೆಯ ಜಂಗಲ್ ಪಾಳ್ಯ ಬಳಿ ಈ ಭೀಕರ ಅಪಘಾತ ನಡೆದಿದೆ. ಜಿಗಣಿ ಕಡೆಯಿಂದ ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದ ಇಟಿಯೋಸ್ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸುತ್ತಿದ್ದ ಚಾಲಕ ಪಾದಚಾರಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ ಕುಮಾರ್ (40) ಎಂಬವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ನಡೆಸಿದ ಕುಡುಕ ಕಾರು ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.