ಕರಾವಳಿ ನ್ಯೂಸ್
ಮಂಗಳೂರಲ್ಲಿ ಶಾಲೆ ಶೀಟ್ ಹಾರಿ ಹೋಯಿತು!
– ಮಕ್ಕಳಿಲ್ಲದ ಕಾರಣ ತಪ್ಪಿದ ದುರಂತ: ಶಾಲೆಗಳೇ ಹುಷಾರ್
– ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ
– ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಮನೆ ಹಾನಿ
– ಬೆಳ್ತಂಗಡಿ, ಚಾರ್ಮಾಡಿ ಘಾಟ್ ಮರ ಬಿದ್ದು ಸಂಚಾರ ಅಡಚಣೆ
NAMMUR EXPRESS NEWS
ಮಂಗಳೂರು: ಕಳೆದ ಎರಡು ದಿನಗಳಿಂದ ಹೆಚ್ಚಾಗಿರುವ ಮಳೆ ಕರಾವಳಿಯಲ್ಲಿ ಮತ್ತಷ್ಟು ಹಾನಿ ಮಾಡುತ್ತಿದೆ. ಈ ನಡುವೆ ಮಂಗಳೂರು ಕೊಟ್ಟಾರ ಸಮೃದ್ಧಿ ಇಂಟೆರ್ ನ್ಯಾಷನಲ್ ಶಾಲೆಯ ಶೀಟುಗಳು ಭಾರೀ ಗಾಳಿ ಮಳೆಗೆ ಹಾರಿ ಹೋಗಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ದುರಂತ ತಪ್ಪಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಶಾಲೆ ಆಡಳಿತ ಮಂಡಳಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿಯಿಂದ ನಿರಂತರ
ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತಿದ್ದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ.ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಿಗೂ ತಹಶೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ. ಭಾರೀ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿಯುತಿದ್ದು ನೀರು ಪಜಿರಡ್ಕ ದೇವಸ್ಥಾನದ ಅವರಣಕ್ಕೆ ನುಗ್ಗುತ್ತಿದೆ,ಯಾವುದೇ ರೀತಿಯ ಪೃಕೃತಿ ವಿಕೋಪ ನೀರಿನಿಂದ ಅಪಾಯ ಎಲ್ಲಿಯೂ ಸಂಭವಿಸದಿರಲಿ ಎಂದು ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಲಾಗಿದೆ.
ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಮನೆ ಹಾನಿ
ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಅವರ ಮನೆಯ ಹಿಂಭಾಗಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಬೆಂಕಿ ಮನೆಗೆ ಆವರಿಸಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಹಾನಿಗೊಂಡ ಮನೆಯಲ್ಲಿ ನಾಲ್ವರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದರ ಭೇಟಿಗೆ ತೆರಳಿದ್ದರು. ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ. ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗಲಿ ಅನಂತರ ಮನೆಯಲ್ಲಿದ್ದ ಪುಸ್ತಕ, ರಬ್ಬರ್ಗೆ ಹೊತ್ತಿದ್ದು, ಎಲ್ಲವೂ ಭಸ್ಮವಾಗಿದೆ.
ಚಾರ್ಮಾಡಿ ಘಾಟ್ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ
ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆಯಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಮಲವಂತಿಗೆ ದಿಡುಪೆ,ಕಿಲ್ಲೂರು, ಭಾಗಗಳಲ್ಲಿ ರಾತ್ರಿ ಭಾರೀ ಮಳೆ ಸುರಿದಿದ್ದು ಸೋಮವತಿ, ಮೃತ್ಯುಂಜಯ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜನರ ಆತಂಕಕ್ಕೆ ಕಾರಣವಾಗಿತ್ತು. ಇವತ್ತು ಕೂಡ ಮಳೆ ಹೆಚ್ಚಾಗಿದ್ದು ನದಿ, ತೊರೆಗಳಲ್ಲಿ ನೀರು ಹೆಚ್ಚಾಗುವ ಸಂಭವ ಇದೆ.ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಬ್ಲಾಕ್ ಆಗಿದ್ದು, ಮರ ತೆರವು ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.