ಈಗ ಸಕಲೇಶಪುರಪುರದಲ್ಲಿ ಭೂ ಕುಸಿತ!
– 6 ವಾಹನಗಳು ಮಣ್ಣಿನಡಿ: ಬಾಯಿ ತೆರೆದ ರಸ್ತೆಗಳು!
– ಮಂಗಳೂರು ಸೇರಿ ಹಲವೆಡೆ ಸಂಚಾರ ಬಂದ್
– ವಯನಾಡು ಭೂಕುಸಿತ: 70ಕ್ಕೂ ಹೆಚ್ಚು ಸಾವು
– ಶಿರೂರು ಗುಡ್ಡ ಕುಸಿತ:11 ಮಂದಿ ದುರ್ಮರಣ
NAMMUR EXPRESS NEWS
ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲುನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದ್ದು, ಟಿಪರ್, ಗ್ಯಾಸ್ ಟ್ಯಾಂಕರ್ ಹಾಗೂ ಇನೋವಾ ಕಾರು ಜಖಂಗೊಂಡು ಭಾರೀ ಹಾನಿ ಸಂಭವಿಸಿದೆ. ರಾಜ್ಯದಲ್ಲಿ ಕೂಡ ಭೀಕರ ಕುಸಿತ ಕಾಣುತ್ತಿದೆ.
ಮಂಗಳೂರು –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಸಕಲೇಶಪುರ ದೊಡ್ಡ ತೆಪ್ಲೆಯಲ್ಲಿ ಭಾರಿ ಭೂಕುಸಿತ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಈ ಹೆದ್ದಾರಿಯಲ್ಲಿ ನಿರ್ಭಂಧಿಸಲಾಗಿದೆ..
ಮಂಗಳೂರು, ಶೃಂಗೇರಿ ಭಾಗದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.ಕೇರಳದ ವಯನಾಡಿನಲ್ಲಿ ಬೃಹತ್ ಭೂಕುಸಿತ ಸಂಭವಿಸಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಿನಲ್ಲಿಯೇ, ಹಾಸನದ ಶಿರಾಡಿ ಘಾಟಿಯಲ್ಲಿಯೂ ರಸ್ತೆಯ ಮೇಲೆ ಭಾರೀ ಭೂಕುಸಿತ ಸಂಭವಿಸಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿದ್ದು, ಇನ್ನಷ್ಟು ಕುಸಿತದ ಆತಂಕ ಎದುರಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ.
ಸತತ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲೆ ಬಳಿ ಕಳೆದ ವಾರವೂ ಭೂಕುಸಿತವಾಗಿತ್ತು. ಕಳೆದ ಹದಿನೈದು ದಿನಗಳಿಂದ ಇಲ್ಲಿ ಮಣ್ಣಿನ ರಾಶಿ ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಕುಸಿದಿದೆ. ಹಲವು ಪ್ರಯಾಣಿಕರು ಕಾರಿನಲ್ಲೇ ಸಿಲುಕಿದ್ದಾರೆ. ಕಾರ್ಯಾಚರಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯುವ ಭೀತಿಯಿದೆ. ಸಾಗರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನ ನಡೆಯುತ್ತಿದೆ.
ಇನ್ನು ಮೂವರ ಶವ ಪತ್ತೆ ಆಗಿಲ್ಲ!
ಕಳೆದ ತಿಂಗಳು ಉತ್ತರ ಕನ್ನಡದ ಅಂಕೋಲಾ ಶಿರೂರಿನಲ್ಲಿ ಗುಡ್ಡ ಕುಸಿದು ಹಲವಾರು ವಾಹನಗಳು ಹಾಗೂ ಜನರು ಜಲಸಮಾಧಿಯಾಗಿದ್ದರು. 11 ಜನ ಸತ್ತಿದ್ದು, ಇವರಲ್ಲಿ 8 ಜನರ ದೇಹಗಳು ದೊರೆತಿವೆ. ಇನ್ನೂ ಮೂವರು ದೇಹಗಳು ದೊರೆತಿಲ್ಲ. ಶೋಧ ಕಾರ್ಯಾಚರಣೆ ನಡೆಯುತ್ತಿದೆ.