ಕರಾವಳಿಯಲ್ಲಿ ಭಾರಿ ಮಳೆ: ಜನರೇ ಅಲರ್ಟ್!
– ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು
– ಕುಸಿದು ಬೀಳುವ ಸ್ಥಿತಿಯಲ್ಲಿ ಗುಡ್ಡಗಳು
– ಅಂಬುಲೆನ್ಸ್ ಮೀಸಲಿರಿಸುವಂತೆ ಸಾರ್ವಜನಿಕರ ಮನವಿ
ವಿಶೇಷ ವರದಿ: ಗಣೇಶ್ ಮಂಗಳೂರು
NAMMUR EXPRESS NEWS
ಉಡುಪಿ /ಮಂಗಳೂರು: ಕರಾವಳಿಯಾದ್ಯಂತ ಕಳೆದ ಎರಡು ದಿನದಿಂದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ನದಿ, ತೊರೆಗಳು ಭೋರ್ಗರೆಯುತ್ತಿದ್ದು, ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದೆ. ಇನ್ನು ಗುಡ್ಡಗಳೆಲ್ಲವೂ ಮೆತ್ತಗಾಗಿದ್ದು, ಮಣ್ಣು, ಕಾಮಗಾರಿಗಳು ಕುಸಿದುಬೀಳುವ ಸಂಭವ ಹೆಚ್ಚಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬೆಳ್ತಂಗಡಿ ಭಾಗದಲ್ಲಿ ಸಂಚಾರ ಕಷ್ಟವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ. ಈ ಹಿನ್ನಲೆ ದಕ್ಷಿಣ ಕನ್ನಡ ಹಾಗೂ ಉಡುಪಿಗೆ ಆಗಸ್ಟ್ 2 ರವರೆಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಗುಡ್ಡ ಕುಸಿತ ಅಪಾಯ: ಎಚ್ಚರ ಎಚ್ಚರ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 169 ರ ಕೆತ್ತಿಕಲ್ ಮತ್ತು ಗುರುಪುರ ಪ್ರದೇಶವು ಇದೇ ರೀತಿಯ ಅಪಾಯಕಾರಿ ಗುಡ್ಡಗಳಾಗಿದ್ದು, ಈ ಹೆದ್ದಾರಿಯಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು, ವಾಹನ ಚಾಲಕರು ಹೆಚ್ಚಿನ ನಿಗಾ ವಹಿಸುವುವ ಅಗತ್ಯವಿದೆ. ಮತ್ತು ಈ ಪ್ರದೇಶದಲ್ಲಿ ಜಿಲ್ಲಾಡಳಿತವು ಸಾರ್ವಜನಿಕರ ಮುಂಜಾಗ್ರತೆಯ ನಿಟ್ಟಿನಲ್ಲಿ ಪೋಲೀಸರನ್ನು ಮತ್ತು ಆಂಬುಲೆನ್ಸ್ ಅನ್ನು ಮೀಸಲುಗೊಳಿಸಿ ಇಡುವ ಅಗತ್ಯ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಶಿರೂರಲ್ಲಿ ಗುಡ್ಡ ಕುಸಿದು ನಾಪತ್ತೆ: ಶೋಧಕ್ಕೆ ಮಳೆ ಅಡ್ಡಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಶಿರೂರಲ್ಲಿ ಗುಡ್ಡ ಕುಸಿದು ನಾಪತ್ತೆ ಅದವರ ರಕ್ಷಣೆಗೆ ಭಾರೀ ಮಳೆ ಅಡ್ಡಿಯಾಗಿದೆ. ಈಗಾಗಲೇ ಜಿಲ್ಲಾಡಳಿತ ಶೋಧ ಕಾರ್ಯ ನಿಲ್ಲಿಸಿದೆ.
ಅಪಾಯದತ್ತ ನೇತ್ರಾವತಿ ನದಿ!
ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7.9 ಮೀಟರ್ಗೆ ತಲುಪಿದೆ. ಈಗಾಗಲೇ ಅಜಿಲಮೊಗರು ಮುಖ್ಯರಸ್ತೆ ಸೇರಿದಂತೆ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ನೀರು ರಸ್ತೆಗೆ ನುಗ್ಗಿದೆ. ನೀರಿನ ಮತ್ತಷ್ಟು ಏರಿಕೆಯಾದರೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. ಪ್ರವಾಹದ ಅಪಾಯವಿರುವ ಶಾಲೆಗಳ ಸಿಆರ್ಪಿ ಮತ್ತು ಎಸ್ಟಿಎಂಸಿ ಸಮಿತಿಗಳಿಗೆ ಅಗತ್ಯಕ್ಕೆ ತಕ್ಕಂತೆ ರಜೆ ಘೋಷಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಭಾರೀ ಗಾಳಿ: ಹಲವೆಡೆ ಅನಾಹುತ
ಭಾರೀ ಗಾಳಿ ಕರಾವಳಿಯಲ್ಲಿ ಅನಾಹುತ ಸೃಷ್ಟಿ ಮಾಡುತ್ತಿದೆ. ಮಂಗಳೂರಲ್ಲಿ ಶಾಲೆಯ ಶೀಟುಗಳು ಹಾರಿ ಹೋಗಿವೆ. ಕಡಲ ಕೊರೆತ ಕೆಲವೆಡೆ ಅಪಾಯಕ್ಕೆ ಕಾರಣವಾಗಿದೆ. ಸಮುದ್ರ ತೀರ, ಬೀಚ್ ಪ್ರವಾಸ ನಿರ್ಬಂಧ ಹೇರಲಾಗಿದೆ.