ಚಿನ್ನದ ಹುಡುಗಿ ಮನು ಭಾಕರ್: ಮತ್ತೆ ಗೆದ್ದ ಭಾರತ!
– ಒಂದೇ ಒಲಿಂಪಿಕ್ಸಲ್ಲಿ 2 ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು
– ಶೂಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಸಾಧನೆ
NAMMUR EXPRESS NEWS
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬೋಜತ್ ಸಿಂಗ್ ಮತ್ತು ಮನು ಭಾಕರ್ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಈ ಮೂಲಕ ಭಾರತ ಮತ್ತೊಂದು ಪದಕ ಸಾಧನೆ ಮಾಡಿದೆ. 2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
2 ಪದಕ ಗೆದ್ದ ಮನು ಬಾಕರ್
ಮಂಗಳವಾರ ನಡೆದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು. ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್-ಸರಬೋಜತ್ ಸಿಂಗ್ ಒಟ್ಟು 580 ಅಂಕ ಸಂಪಾದಿಸಿದ್ದರು. ಕೊರಿಯಾದ ಜೋಡಿ 579 ಅಂಕ ಗಳಿಸಿತು. ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
2 ಪದಕ ಗೆದ್ದ ಶೂಟಿಂಗ್ ಕ್ರೀಡಾಪಟುಗಳು!
ಸದ್ಯ ಭಾರತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2 ಪದಕ ತನ್ನದಾಗಿಸಿಕೊಂಡಿದೆ. 2 ಪದಕ ಕೂಡ ಶೂಟಿಂಗ್ ವಿಭಾಗದಲ್ಲಿ ಬಂದಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈ ಬಾರಿ ಪ್ಯಾರಿಸ್ನಲ್ಲಿ 2 ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನೇ ಮಾಡಿ ತಮ್ಮ ಎಲ್ಲ ನೋವನ್ನು ಮರೆತಿದ್ದಾರೆ.