ಮಲೆನಾಡಿನಲ್ಲಿ ಗಿಡ್ಡ ತಳಿ ಜಾನುವಾರು ಮಾಯ!
– ವಿನಾಶದ ಅಂಚಿನಲ್ಲಿ ಗಿಡ್ಡತಳಿ ಹಸುಗಳು
– ಜಾನುವಾರು ಸಾಕಣೆಗೆ ಬೇಕು ಪ್ರೋತ್ಸಾಹ
NAMMUR EXPRESS NEWS
ಮಲೆನಾಡು: ಮಲೆನಾಡಿನಾದ್ಯಂತ ಕಂಡು ಬರುತ್ತಿದ್ದ ಮಲೆನಾಡಿನ ಗಿಡ್ಡ ತಳಿಗಳ ಜಾನುವಾರುಗಳನ್ನು ಸಾಕಣೆ, ನಿರ್ವಹಣೆ ಮಾಡಲಾಗದೇ ಮಾರಾಟ ಮಾಡುತ್ತಿರುವುದರಿಂದ ಕಣ್ಮರೆಯಾಗುತ್ತಿವೆ. ಇದು ಮುಂದುವರಿದಲ್ಲಿ ಈ ತಳಿಯ ಜಾನುವಾರುಗಳು ಅವಸಾನದ ಅಂಚಿಗೆ ತಲುಪುವುದು ನಿಶ್ಚಿತ.
ಮಲೆನಾಡಿನಲ್ಲಿ ಈ ಹಿಂದೆ ಪ್ರತೀ ಮನೆಗಳ ಕೊಟ್ಟಿಗೆಗಳಲ್ಲೂ ಜಾನುವಾರುಗಳು ತುಂಬಿಕೊಂಡಿದ್ದವು. ಜಾನುವಾರುಗಳನ್ನು ಗೋಮಾಳಗಳಿಗೆ ಬಿಟ್ಟು ಮೇಯಿಸಿಕೊಂಡು ಬರಲು ದನ ಕಾಯುವ ವ್ಯಕ್ತಿಯೊಬ್ಬ ಮೀಸಲಿರುತ್ತಿದ್ದ. ಊರಿನ ಎಲ್ಲ ಜಾನುವಾರುಗಳನ್ನು ಗೋಮಾಳದಲ್ಲಿ ಮೇಯಿಸಿಕೊಂಡು ಬರಲು ಈ ಹಿಂದೆ ಗೋಪಾಲಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಮಳೆಗಾಲ ಮುಗಿದು ಪೈರುಗಳ ಕೊಯ್ದು ಮುಗಿದ ಮೇಲೆ ಜಾನುವಾರುಗಳನ್ನು ಭತ್ತದ ಗದ್ದೆಗಳಲ್ಲಿ ಮೇಯಲು ಬಿಡಲಾಗುತ್ತಿತ್ತು. ಸದ್ಯ ಮಲೆನಾಡು ಭಾಗದಲ್ಲಿ ಗೋಮಾಳಗಳು ಒತ್ತುವರಿದಾರರು, ಪ್ರಭಾವಿಗಳ ಪಾಲಾಗಿದ್ದು, ಗೋಮಾಳಗಳಿಲ್ಲದೇ ದನ ಮೇಯಿಸುತ್ತಿದ್ದವರಿಗೂ ಕೆಲಸ ಇಲ್ಲದಂತಾಗಿದೆ.
ಗದ್ದೆ, ಗೋಮಾಳ ಹೋಗಿ ತೋಟ ಬಂತು!
ಮಲೆನಾಡಿನಲ್ಲಿ ಈ ಹಿಂದೆ ಗಿಡ್ಡ ತಳಿಗಳ ಜಾನುವಾರುಗಳನ್ನು ನಂಬಿಕೊಂಡು ಸಾವಿರಾರು ಬಡ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದವು. 10-20 ಜಾನುವಾರುಗಳನ್ನು ಸಾಕುತ್ತಿದ್ದ ಈ ಕುಟುಂಬಗಳು ಹಸುಗಳನ್ನು ಗೋಮಾಳಗಳಲ್ಲಿ ಮೇಯಿಸಿಕೊಂಡು ಹಾಲು, ತುಪ್ಪ ಮಾರಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದ ಭತ್ತದ ಗದ್ದೆಗಳು ಕ್ರಮೇಣ ಕಾಫಿ, ಅಡಿಕೆ ತೋಟಗಳಾದ ಪರಿಣಾಮ ಹಾಗೂ ಜಾನುವಾರು ಮೇಯಿಸಲು ಇದ್ದ ಗೋಮಾಳಗಳು ಒತ್ತುವರಿದಾರರ ಪಾಲಾದ ಪರಿಣಾಮ ಮಲೆನಾಡಿನಲ್ಲಿ ಬಡ ವರ್ಗದ ಜನರು ಸಾಕುತ್ತಿದ್ದ ಗಿಡ್ಡ ತಳಿ ಹಸುಗಳಿಗೆ ಮೇವು ಒದಗಿಸಲು ಸಾಧ್ಯವಾಗದೇ ಜಾನುವಾರುಗಳನ್ನು ಸಾಕುವುದನ್ನೇ ನಿಲ್ಲಿಸುತ್ತಿದ್ದಾರೆ. ತಮ್ಮ ಬಳಿ ಇದ್ದ ಗಿಡ್ಡ ತಳಿಯ ರಾಸುಗಳನ್ನು ಮಾರಾಟ ಮಾಡಲಾರಂಭಿಸಿದ್ದು, ಇದರಿಂದ ಮಲೆನಾಡಿನ ಅಪರೂಪದ ಗಿಡ್ಡ ತಳಿಗಳು ವಿನಾಶದ ಅಂಚಿಗೆ ತಲುಪುತ್ತಿವೆ.
ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಹಾಲು
ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳ ಹಾಲು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹಸುಗಳ ನಿರ್ವಹಣೆ ಸಾಧ್ಯವಾಗದೇ ಜನರು ಗಿಡ್ಡ ತಳಿಗಳನ್ನು ಮಾರಾಟ ಮಾಡಿ ಉತ್ತಮ ಹಾಲುಕೊಡುವ ಮಿಶ್ರ ತಳಿಗಳ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ.
ಜಾನುವಾರು ಹೂಟಿ ಇಲ್ಲವೇ ಇಲ್ಲ!
ಕಳೆದ ದಶಕದ ಹಿಂದೆ ಕೃಷಿ ಚಟುವಟಿಕೆಗೆ ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು. ಮುಖ್ಯವಾಗಿ ಬೇಸಾಯ ಮತ್ತು ಒಕ್ಕಣೆ ಕಾರ್ಯಕ್ಕೆ ಇವುಗಳ ಉಪಯೋಗ ಹೆಚ್ಚಿನದ್ದಾಗಿತ್ತು. ಈಗ ಅವುಗಳ ಜಾಗಕ್ಕೆ ಟ್ರ್ಯಾಕ್ಟರ್ ಮತ್ತು ಟಿಲ್ಲರ್ಗಳು ಬಂದಿರುವುದರಿಂದ ಎತ್ತುಗಳನ್ನು ಸಾಕಲು ಜನರು ಇಚ್ಛಿಸುತ್ತಿಲ್ಲ. ಮಲೆನಾಡಿನಲ್ಲಿ ಈಗಲೂ ಜಮೀನು, ಮೇವು ಹೊಂದಿರುವ ಕೆಲವು ರೈತ ಕುಟುಂಬಗಳು ಈ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಅಂಕಿಅಂಶಗಳಿಂದ ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ತಳಿಗಳು ಮಾಯವಾಗುತ್ತಿರುವುದು ಸ್ಪಷ್ಟವಾಗಿದ್ದು, ಇವುಗಳ ಜಾಗದಲ್ಲಿ ಮಿಶ್ರತಳಿಗಳ ಜಾನುವಾರುಗಳು ಬರುತ್ತಿವೆ.
10-20 ಮಲೆನಾಡು ಗಿಡ್ಡ ತಳಿಗಳನ್ನು ಸಾಕುತ್ತಾ ಅವುಗಳ ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸದ್ಯ ಮಿಶ್ರತಳಿಯ ಒಂದೆರಡು ಹಸುಗಳನ್ನು ಖರೀದಿಸಲಾರಂಭಿಸಿದ್ದಾರೆ. ಅಪರೂಪದ ತಳಿಗಳ ಉಳಿವಿಗೆ ಸರಕಾರ, ಸಂಬಂಧಿಸಿದ ಇಲಾಖೆ ಇನ್ನಾದರೂ ಮುಂದಾಗಬೇಕು, ಈ ತಳಿಗಳ ಜಾನುವಾರು ಸಾಕಣೆಗೆ ಪ್ರೋತ್ಸಾಹ ನೀಡಬೇಕು ಎಂದು ಜಾನುವಾರು ಪ್ರಿಯರು ಆಗ್ರಹಿಸುತ್ತಿದ್ದಾರೆ.