ರಾಜ್ಯದಲ್ಲಿ ಅದ್ದೂರಿ ಗಣೇಶ ಹಬ್ಬಕ್ಕೆ ಸಜ್ಜು!
– ಮಳೆ ಕಡಿಮೆಯಾಗಲು ಗಣೇಶನಲ್ಲಿ ಮೊರೆ
– ವಿಗ್ರಹ ತಯಾರಕರು, ವ್ಯಾಪಾರಿಗಳಲ್ಲಿ ಲಾಭದ ನಿರೀಕ್ಷೆ
– ಯುವಕರಲ್ಲಿ ಗರಿಗೆದರಿದ ಉತ್ಸಾಹ: ಗಣೇಶ ಮತ್ತೆ ಬಂದ
NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ.
ಕೋಟ್ಯಂತರ ರೂಪಾಯಿ ವಹಿವಾಟಿಗೆ ಕಾರಣವಾಗುವ ಗಣೇಶ ಚತುರ್ಥಿ ಈ ಬಾರಿ ಗಣೇಶ ವಿಗ್ರಹ ತಯಾರಕರು, ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ವ್ಯಾಪಾರಿಗಳು ಹಾಗೂ ಮಾರಾಟಗಾರರು ಆದಾಯದ ನಿರೀಕ್ಷೆಯಲ್ಲಿದ್ದಾರೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಗೌರಿ ಗಣೇಶ ವಿಗ್ರಹಗಳ ಮಾರಾಟ ಮಳಿಗೆಗೆಳನ್ನು ಹಾಕಲು ವಿಗ್ರಹ ತಯಾರಕರು ಸಿದ್ಧತೆಯಲ್ಲಿದ್ದಾರೆ. ಗಣೇಶೋತ್ಸವ ಸಂಘಟಕರು ನೇರವಾಗಿ ತಯಾರಕರನ್ನು ಭೇಟಿ ಮಾಡಿ ಖರೀದಿ ಮಾಡಲಿದ್ದು ಮುಂಗಡ ಬುಕಿಂಗ್ ಗೆ ಆರ್ಡರ್ ನೀಡುತ್ತಿದ್ದಾರೆ.
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಣ್ಣದ ಗಣಪತಿಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ನಿರ್ಬಂಧಿಸಲಾಗಿದೆ. ಜಲಮೂಲಗಳು ಹಾಳಾಗುವುದನ್ನು ತಪ್ಪಿಸಬೇಕು. ಹಾಗಾಗಿ ಪರಿಸರ ಮಾಲಿನ್ಯ ತಪಾಸಣಾಧಿಕಾರಿಗಳು ಈ ದಿಸೆಯಲ್ಲಿ ಹೆಚ್ಚು ಸಕ್ರಿಯವಾಗಿರಲಿದ್ದಾರೆ. ಮಣ್ಣಿನ ವಿನಾಯಕ ಮೂರ್ತಿ ಬಳಸಲು ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ.
ಯುವಕರಲ್ಲಿ ಗರಿಗೆದರಿದ ಉತ್ಸಾಹ!
ಇನ್ನು ಯುವಕರಲ್ಲಿ ಗಣೇಶ ಚತುರ್ಥಿಗೆ ಉತ್ಸಾಹ ಗರಿಗೆದರಿದ್ದು, ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯುವ ಜನಾಂಗ ಹೆಚ್ಚು ಒಲವು ತೋರಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲು ಮುಂದಾಗಿವೆ. ವೈವಿಧ್ಯಮಯ ಗಣೇಶನನ್ನು ಪ್ರತಿಷ್ಠಾಪಿಸಲು ಸ್ಪರ್ಧೆಗಳು ಏರ್ಪಟ್ಟಿವೆ ಹಾಗೂ ಡಿಜೆ ಸೌಂಡ್ಸ್ ಗಳನ್ನೆಲ್ಲ ಹಾಕಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಾರೆ ಈ ಬಾರಿ ಅದ್ದೂರಿ ಗೌರಿ ಗಣೇಶ ಹಬ್ಬ ಆಚರಣೆಗೆ ರಾಜ್ಯಾದ್ಯಂತ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಸಂಘ ಸಂಸ್ಥೆಗಳು ಸಭೆ ನಡೆಸಿ ಸಿದ್ಧತೆಯಲ್ಲಿವೆ. ಈ ನಡುವೆ ಮಳೆ ಅಬ್ಬರ ಎಲ್ಲಾ ಕಡೆ ಇದ್ದು ಮಳೆ ಕಡಿಮೆಯಾಗಲಿ ಎಂಬ ಪ್ರಾರ್ಥನೆ ಕೇಳಿ ಬರುತ್ತಿದೆ.