ಉಡುಪಿಯಲ್ಲಿ ಮಾಸ್ಕ್ ಗ್ಯಾಂಗ್ ಕಳ್ಳತನ ಪ್ಲಾನ್!
– ನಾಲ್ಕು ಮಂದಿ ಮುಸುಕುಧಾರಿಗಳಿಂದ ಪ್ಲಾಟ್ಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ
– ಮಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಗೋಲ್ಮಾಲ್
NAMMUR EXPRESS NEWS
ಉಡುಪಿ: ಮಂಗಳೂರಲ್ಲಿ ಚಡ್ಡಿ ಗ್ಯಾಂಗ್ ಬಂಧನ ಬಳಿಕ ಕುಂದಾಪುರದಲ್ಲಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಕಳ್ಳರ ತಂಡ ಆತಂಕ ಸೃಷ್ಟಿ ಮಾಡಿದೆ.
ಉಡುಪಿ ನಗರದ ಬ್ರಹ್ಮಗಿರಿಯ ಭಾಗದ ಅಪಾರ್ಟ್ ಮೆಂಟ್ ನ ಪ್ಲಾಟ್ ವೊಂದಕ್ಕೆ ನಾಲ್ಕು ಮಂದಿ ಮುಸುಕುಧಾರಿಗಳು ನುಗ್ಗುಲು ಯತ್ನಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಆ. 1 ರಂದು ಮುಂಜಾನೆ ನಡೆದಿದೆ.
ಮುಸುಕುಧಾರಿ ಆಗಂತುಕರು ರಾಡ್ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್ ಮೆಂಟ್ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂತಿರುಗಿರುವುದು ಸೆರೆಯಾಗಿದೆ. ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ ಫ್ಲಾಟ್ನಲ್ಲಿ ವಯಸ್ಸಾದ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳು ಒಂದು ವಾರದ ಹಿಂದಷ್ಟೇ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಈ ನಾಲ್ವರು ಶಸ್ತ್ರಸಜ್ಜಿತ ಮುಸುಕುಧಾರಿಗಳು ಹಲವಾರು ಖಾಲಿ ಅಪಾರ್ಟ್ ಮೆಂಟ್ಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳ ಹುಡುಕಾಡುವ ಜೊತೆಗೆ ಅಪಾರ ಹಾನಿಯನ್ನುಂಟುಮಾಡಿರುತ್ತಾರೆ.ಇನ್ನು ಈ ನಾಲ್ವರು ಒಂದೇ ಬಡಾವಣೆಯ ಒಟ್ಟು ಮೂರು ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ದರೋಡೆಗೆ ಯತ್ನಿಸಿದ್ದರು.
ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಗೋಲ್ಮಾಲ್
ಮಂಗಳೂರು: ವ್ಯಕ್ತಿಯೋರ್ವ ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಐಸ್ಕ್ರೀಂ ಪಾರ್ಲ್ರನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿಸಿದ್ದಾನೆ. ಆತನ ಮಾತನ್ನು ನಂಬಿ 1.50 ಲಕ್ಷ ರೂ. ಒಟ್ಟುಗೂಡಿಸಿ ಪ್ರಕಾಶ್ ಪೂಜಾರಿಯ ಖಾತೆಗೆ ನೆಫ್ಟ್ ಮಾಡಿದ್ದಾರೆ. ಇದೇ ವೇಳೆ ಇತರರೂ ಕೂಡ ಆತನಿಗೆ ಹಣ ನೀಡಿದ್ದಾರೆ. ಸಾಲ ಮಂಜೂರಾಗದೇ ಇದ್ದಾಗ ಆತನ ಮನೆಗೆ ಹೋಗಿ ವಿಚಾರಿಸಿದ್ದು, ಸಾಲ ಮಂಜೂರಾಗುವ ಬಗ್ಗೆ ಭರವಸೆಯನ್ನೂ ನೀಡಿದ್ದ. ಹಲವು ದಿನಗಳು ಕಳೆದರೂ, ಸಾಲ ದೊರೆಯದೇ ಇದ್ದಾಗ ಆತನ ಮೊಬೈಲ್ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ಕೇಳಿದಾಗ ಆತನ ತಾಯಿ ಮತ್ತು ಪತ್ನಿ ಆತ ಮನೆಗೆ ಬಾರದೆ 2 ವರ್ಷ ಆಯಿತು ಎಂದು ತಿಳಿಸಿದ್ದಾರೆ. ಇನ್ನಷ್ಟು ವಿಚಾರಿಸಿದಾಗ ಆತನ ಪತ್ನಿ ಸಾಲಕ್ಕೆ ಸಂಬಂಧಿಸಿದ ಹಲವರಿಂದ ಹಣ ಪಡೆದಿರುವುದು ತಿಳಿದುಬಂದಿದೆ.