ನೋಡ ನೋಡುತ್ತಾ ಸರ್ಕಾರಿ ಬಸ್ ಭಸ್ಮ!
– ಸಾಗರದಲ್ಲಿ ನಡೆದ ಘಟನೆ: 12 ಪ್ರಯಾಣಿಕರು ಪಾರು
– ಶಿವಮೊಗ್ಗ: ಮಹಿಳೆಗೆ ವಂಚನೆ: ಬಿಜೆಪಿ ಯುವ ನಾಯಕ ಅರೆಸ್ಟ್!
– ಗೋಬಿ ಮಂಚೂರಿಗೆ ಹಾನಿಕಾರಕ ಕಲರ್: ಎಚ್ಚರಿಕೆ
NAMMUR EXPRESS NEWS
ಸಾಗರ: ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಬೆಂಕಿಗಾಹುತಿಯಾಗಿದ್ದು ದುರಂತ ತಪ್ಪಿದೆ.
ಪ್ರಯಾಣಿಕರನ್ನು ಹೊತ್ತು ಸಾಗುತಿದ್ದ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಮಂಗಳವಾರ ಬೆಳಿಗ್ಗೆ ಬೆಂಕಿಗೆ ಆಹುತಿ ಆಗಿದೆ.
ಭಟ್ಕಳದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಬರುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 12 ಜನ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.
ಮಹಿಳೆಗೆ ವಂಚನೆ: ಬಿಜೆಪಿ ಯುವ ನಾಯಕ ಅರೆಸ್ಟ್!
ಶಿವಮೊಗ್ಗ: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಹಣ ಪಡೆದು ಹಿಂತಿರುಗಿಸದ ಹಿನ್ನೆಲೆ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಶರತ್ ಕಲ್ಯಾಣಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆ ಶಿವಮೊಗ್ಗ ಪೊಲೀಸರು ವಿಜಯಪುರದಲ್ಲಿ ಶರತ್ ಕಲ್ಯಾಣಿಯನ್ನು ಬಂಧಿಸಿದ್ದಾರೆ.
‘ಫೇಸ್ಬುಕ್ನಲ್ಲಿ ಶರತ್ ಕಲ್ಯಾಣಿ ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಹಣವನ್ನು ಕೂಡ ಪಡೆದಿದ್ದ. ಹಣ ಹಿಂತಿರುಗಿಸುವಂತೆ ಕೇಳಿದಾಗ ಸಂಪರ್ಕ ಬಿಟ್ಟಿದ್ದ. ಹಾಗಾಗಿ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನಿಗೆ ಮದುವೆಯಾಗಿರುವುದು ಗೊತ್ತಾಯಿತು. ಈ ಸಂದರ್ಭ ತನ್ನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾನೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು.
ಗೋಭಿ ಮಂಚೂರಿಗೆ ಹಾನಿಕಾರಕ ಕಲರ್: ಎಚ್ಚರಿಕೆ
ತೀರ್ಥಹಳ್ಳಿ: ಗೋಭಿ ಮಂಚೂರಿ, ಕಬಾಬ್ ಹಾಗೂ ಇನ್ನಿತರೆ ಆಹಾರ ಪದಾರ್ಥಗಳಿಗೆ ಹಾನಿಕಾರಕ ಕಲರ್ ಬಳಕೆ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರದ ಆದೇಶವಿರುವ ಹಿನ್ನಲೆ ತೀರ್ಥಹಳ್ಳಿ ಪ.ಪಂ.ಮುಖ್ಯಾಧಿಕಾರಿ ಡಿ.ನಾಗರಾಜ್, ಆರೋಗ್ಯಾಧಿಕಾರಿ ಭದ್ರಾವತಿ ರಮೇಶ್ ಹಾಗೂ ಸಿಬ್ಬಂದಿಗಳು ಹೋಟೆಲ್, ತಿಂಡಿಗಾಡಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಹಲವರು ‘ಕಲರ್’ ಉಪಯೋಗಿಸಿದ್ದು ಕಂಡು ಬಂತು. ಅಂತವರಿಗೆ ಅಂತಿಮ ಎಚ್ಚರಿಕೆ ನೀಡಿದ ಪ.ಪಂ.ಇನ್ನೊಮ್ಮೆ ಈ ರೀತಿ ಕಲರ್, ಹಾನಿಕಾರಕ ರಾಸಾಯನಿಕ ಬಳಸಿದ್ದು ಕಂಡಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.