ರೈಲ್ವೆ ಹಳಿ ಮೇಲೆ ಉರುಳಿದ ಬಂಡೆಗಳು!
– ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ
– ರೈಲು ಸಂಚಾರ ಸ್ಥಗಿತ: ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
– ಮತ್ತೆ ಮತ್ತೆ ಘಟನೆ: ಪ್ರಕೃತಿಯ ಎಚ್ಚರಿಕೆ ಕರೆಗಂಟೆ
NAMMUR EXPRESS NEWS
ಸಕಲೇಶಪುರ: ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ನಡೆದಿದ್ದು ಇದರಿಂದ ಹಾಸನ- ಮಂಗಳೂರು ಮಾರ್ಗದ ರೈಲುಗಳ ಸಂಚಾರ
ಸ್ಥಗಿತವಾಗಿದೆ.
ಶುಕ್ರವಾರ (ಆಗಸ್ಟ್ 9) ಮಧ್ಯರಾತ್ರಿ ಈ ಘಟನೆ ನಡೆದಿದ್ದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ.
ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತಿವೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ರೈಲುಗಳಲ್ಲಿ ಸಾವಿರಾರು ಪ್ರಯಾಣಿಕರು ಇದ್ದು ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಯಿತು.ಮಣ್ಣು ತೆರವು ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.
ಕಳೆದ ರಾತ್ರಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ರೈಲು ಪ್ರಯಾಣಿಕರು ದೊಡ್ಡ ದುರಂತದಿಂದ ಪಾರಾಗಿದ್ದಾರೆ., ಹಳಿಗಳ ಮೇಲೆ ಬಿದ್ದ ದೊಡ್ಡ ದೊಡ್ಡ ಬಂಡೆ ಕಲ್ಲುಗಳ ತೆರವುಗೊಳಿಸಿದ್ದಾರೆ. ರೈಲ್ವೇ ಇಲಾಖೆಯ ಈ ಕೆಲಸದಲ್ಲಿ ಸತತವಾಗಿ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ , ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ , ತೆರೆಮರೆಯಲ್ಲಿ ಸಹಾಯ ಮಾಡಿದವರಿಗೆ ಪ್ರಯಾಣಿಕರು ಧನ್ಯವಾದ ಅರ್ಪಿಸಿದ್ದಾರೆ.