ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಅಟ್ಯಾಕ್!
– ಉಡುಪಿ ಭಾಗದಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ
– ಕುಕ್ಕೆ ಲಡ್ಡು ಪ್ರಸಾದದಲ್ಲಿ ರಬ್ಬರ್ ಬ್ಯಾಂಡ್ ಪತ್ತೆ!
– ಮಂಗಳೂರಲ್ಲಿ ಲವ್ ಜಿಹಾದ್!?: ಮತಾಂತರಗೊಳಿಸಿ ವಿವಾಹ
– ಕುಂದಾಪುರ: ನಿಂತ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
– ಕಾರ್ಕಳ: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ!
– ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ಹೊಳೆ ಪಾಲು!
NAMMUR EXPRESS NEWS
ಉಡುಪಿ: ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ.ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಿವೆ. ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಬೀದಿ ನಾಯಿಗಳು ಒಮ್ಮೇಲೆ ನುಗ್ಗಿ ಬಂದಿವೆ.
ನಾಲೈದು ನಾಯಿಗಳು ಒಮ್ಮೆಲೇ ದಾಳಿ ಮಾಡಿದ್ದರಿಂದ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ಬಚಾವಾಗಿದ್ದಾಳೆ.ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೂಡೆ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಕಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಬೀದಿ ನಾಯಿಗಳ ಕಾಟದಿಂದ ಮುಕ್ತಿ ನೀಡುವಂತೆ ಹಲವು ದಿನಗಳಿಂದ ಮನವಿ ಮಾಡುತ್ತಿದ್ದಾರೆ.
ಕುಕ್ಕೆ ಲಡ್ಡು ಪ್ರಸಾದದಲ್ಲಿ ರಬ್ಬರ್ ಬ್ಯಾಂಡ್ ಪತ್ತೆ!
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದ ಸೇವೆಗೆ ದೊರೆತ ಲಡ್ಡಿನಲ್ಲಿ ರಬ್ಬರ್ ಬ್ಯಾಂಡ್ ದೊರೆತಿರುವುದಾಗಿ ವರದಿಯಾಗಿದೆ.
ಚೊಕ್ಕಾಡಿ ಬಳಿಯ ಪದವುನ ವ್ಯಕ್ತಿಯೊಬ್ಬರು ಆ.9 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದ್ದು ಲಡ್ಡು ಪ್ರಸಾದ ಸೇವೆಯನ್ನು ಮಾಡಿಸಿದ್ದರು. ಇದಕ್ಕೆ ಪ್ರತಿಯಾಗಿ ದೊರೆತ ಲಡ್ಡನ್ನು ಮನೆಗೆ ಬಂದು ಹಂಚಿದಾಗ ಲಡ್ಡು ಒಂದರಲ್ಲಿ ರಬ್ಬರ್ ಬ್ಯಾಂಡ್ ಇರುವುದು ತಿಳಿಯಿತು. ಈ ಮಾಹಿತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ
ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ಹೊಳೆ ಪಾಲು!
ಉಡುಪಿ: ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನದ ಕೋಡಿ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಸಾಸ್ತಾನ ಯಕ್ಷಿಮಠ ನಿವಾಸಿ ರಾಜು ಮರಕಾಲ (66) ಎಂದು ಗುರುತಿಸಲಾಗಿದೆ.
ರಾಜು ಅವರು ಸಂಜೆ ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆಯಲೆಂದು ಹೋಗಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದರು. ಶನಿವಾರ ಬೆಳಿಗ್ಗೆ ಸಾಸ್ತಾನ ಕೋಡಿ ಹೊಳೆಯಲ್ಲಿ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ ದೋಣಿಯಲ್ಲಿ ಶವವನ್ನು ದಡಕ್ಕೆ ತಂದಿದ್ದಾರೆ.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಗಳೂರಲ್ಲಿ ಲವ್ ಜಿಹಾದ್!?: ಮತಾಂತರಗೊಳಿಸಿ ವಿವಾಹ
ಮಂಗಳೂರು : ಮಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೇರಳದ ನಟೋರಿಯಸ್ ಕ್ರಿಮಿನಲ್ ಇದೀಗ ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯಾಳನ್ನು ಅಶ್ವಕ್ ಎಂಬ ನಟೋರಿಯಸ್ ಕ್ರಿಮಿನಲ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಕೇವಲ ಎರಡೇ ತಿಂಗಳಲ್ಲಿ ಆತ ಪ್ರೀತಿಯ ಖೆಡ್ಡಾಕ್ಕೆ ಬೀಳಿಸಿದ್ದ ಎಂದು ಆರೋಪಿಸಲಾಗಿದೆ.
ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಾಳನ್ನು ಜೂ.6ರಂದು ಅಲ್ಲಿಂದಲೇ ಕರೆದುಕೊಂಡು ಹೋಗಿದ್ದ ಅಶ್ವಕ್. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಆದರೆ ಅಷ್ಟಕ್ ನೊಂದಿಗೆ ತೆರಳುವುದಾಗಿ ಹೇಳಿದ್ದಳು. ವಿಸ್ಮಯಳನ್ನು ಮತಾಂತರ ನಡೆಸಿರುವುದಾಗಿ ಆಕೆಯ ತಂದೆ ಆರೋಪಿಸಿದ್ದರು.
ಬಳಿಕ ಮಂಗಳೂರಿನ ವಿಎಚ್ಪಿ ನಾಯಕರನ್ನು ಭೇಟಿಯಾಗಿ ವಿಸ್ಮಯಾ ತಂದೆ ಮಗಳನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು. ಕೊನೆಗೂ ಆಕೆ ತಂದೆಯ ಕೈಗೆ ಸಿಗದೇ ಅಶ್ವಕ್ನನ್ನು ವಿಸ್ಮಯಾ ಮುಸ್ಲಿಂ ಪದ್ಧತಿ ಪ್ರಕಾರ ವಿವಾಹವಾಗಿದ್ದಾಳೆ. ಈತ ಕೇರಳ ಹೈಕೋರ್ಟ್ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದ. ಇದೀಗ ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಾಳನ್ನು ಮದುವೆಯಾಗಿದ್ದಾನೆ.ಇದೀಗ ಆಕೆ ಮದುವೆಯಾಗಿರುವ ಫೋಟೊವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿರುವ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು, ‘ಕ್ಷಮಿಸಿ ವಿನೋದ್ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’ ವಿಸ್ಮಯಾಳ ತಂದೆಯ ಬಳಿ ಕ್ಷಮೆ ಕೋರಿದ್ದಾರೆ.
ಕುಂದಾಪುರ: ನಿಂತ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
ಕುಂದಾಪುರ: ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ಸಹಿತ ಹಲವರು ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರು ಪ್ರವಾಸಿ ಹೋಟೆಲ್ ಬಳಿ ನಡೆದಿದೆ.
ಭಟ್ಕಳದಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ ತಲ್ಲೂರು ಪ್ರವಾಸಿ ಸಮೀಪ ಪ್ರಯಾಣಿಕರನ್ನು ಇಳಿಸಲು ಒಮ್ಮೆಲೆ ನಿಲ್ಲಿಸಿದ ಸಂದರ್ಭ ಬಸ್ಸಿನ ಹಿಂದೆ ಬರುತ್ತಿದ್ದ ಎಲ್ ಪಿ ಲಾರಿಯು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದಾಗಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು, ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯರು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾರ್ಕಳ: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ!
ಕಾರ್ಕಳ : ಕಾರ್ಕಳ- ಹೆಬ್ರಿ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮುನಿಯಾಲು ಎಂಬಲ್ಲಿ ಓವರ್ ಟೇಕ್ ಭರದಲ್ಲಿ ಕಾರೊಂದು ರಸ್ತೆ ವಿಭಜಕದಿ ಮೇಲೆ ಪಲ್ಟಿ ಹೊಡೆದಿದೆ.
ಕಾರ್ಕಳ ಕಡೆಯಿಂದ ಹೆಬ್ರಿಗೆ ಹೋಗುವ ರಾಜ್ಯ ಹೆದ್ದಾರಿ ಮುನಿಯಾಲಿನ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಯುವಕರ ಕೂಡಿಕೊಂಡು ಹೋಗುತ್ತಿದ್ದ ಎರಡು ಕಾರುಗಳ ನಡುವೆ ಓವರ್ ಟೇಕ್ ನಡೆದಿದ್ದು, ಇನ್ನೊಂದು ಕಾರಿನ ಚಾಲಕ ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೇ ಇದ್ದುದು ಘಟನೆಗೆ ಕಾರಣವೆನ್ನಲಾಗಿದೆ.
ಮುನ್ನುಗ್ಗುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದ್ದು, ಕಾರಿನೊಳಗಿದ್ದವರಿಗೆ ಸಣ್ಣಪುಟ್ಟ ರೀತಿಯಲ್ಲಿ ಗಾಯವಾಗಿದೆ.ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಘಟನೆಗೆ ಕಾರಣವಾಗಿರುವ ಎರಡು ಕಾರುಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.