ಕರಾವಳಿಯಲ್ಲಿ ಸ್ವಾತಂತ್ರ್ಯ ಹಬ್ಬದ ಸಡಗರ!
– ಕಾರ್ಕಳದ ಕ್ರಿಯೇಟಿವ್, ಉಡುಪಿ ತ್ರಿಶಾ ಕಾಲೇಜಿನಲ್ಲಿ ಸ್ವಾತಂತ್ರ್ಯ ಹಬ್ಬ
ಬಾರ್ಕೂರು ರೋಟರಿ ಕ್ಲಬ್ ಸ್ವಾತಂತ್ರೋತ್ಸವ!
– ಸೈನಿಕರಿಗೆ ಗೌರವಾರ್ಪಣೆ: ತ್ರಿವರ್ಣದ ರಂಗು
NAMMUR EXPRESS NEWS
ಕಾರ್ಕಳ : ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸ್ವಾತಂತ್ರ್ಯದ ಕನಸುಗಾರರು ಸ್ವಾತಂತ್ರ್ಯವನ್ನು ನಮಗೆ ಧಾರೆಯೆರೆದರು. ಅದನ್ನು ನಾವು ಉಳಿಸೋಣ. ಉಳಿಸಿ ಮುಂದಕ್ಕೆ ಬೆಳೆಸೋಣ ಎಂಬ ಸಂದೇಶವನ್ನು ನೀಡಿದರು. ಧ್ವಜಾರೋಹಣದ ಬಳಿಕ ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ” ಕ್ರಿಯೇಟಿವ್ ಸವಿಗಾನ ” ಎಂಬ ಶೀರ್ಷಿಕೆಯಡಿ ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ ಕಾರ್ಯಕ್ರಮ ‘ ಸಪ್ತಸ್ವರ’ ವೇದಿಕೆಯಲ್ಲಿ ನಡೆಯಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥರಾದ ರಾಜೇಶ್ ಶೆಟ್ಟಿರವರು ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಯುತ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.
ಕಲ್ಯಾಣಪುರ ತ್ರಿಶಾ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸ್ರೂರು ಶಾರದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚಂದ್ರಪ್ರಭಾ ಹೆಗ್ಡೆ ಇವರು ಧ್ವಜಾರೋಹಣ ಗೈದು ದೇಶ ಸೇವೆಯೇ ಈಶ ಸೇವೆ, ಭಾಷಾ ಎಚ್ಚರಿಕೆ, ಗುರು ಶಿಷ್ಯ ಪರಂಪರೆ- ಸಂಬಂಧ ಮಾತೃದೇವೋಭವ ಇದರ ಚರಿತಾರ್ಥ, ಜೀವನ ಮೌಲ್ಯಗಳ ಅಳವಡಿಕೆ, ಮೊದಲಾದ ವಿಚಾರಗಳನ್ನು ಉಲ್ಲೇಖಿಸುತ್ತಾ, ಭಗವದ್ಗೀತೆಯ ಮೇರುವಾಕ್ಯ “ಸ್ವಧರ್ಮೇ ನಿಧನಂ ಶ್ರೇಯ:” ಇದನ್ನು ಚೆನ್ನಾಗಿ ವ್ಯಾಖ್ಯಾನಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಡಾ.ಬಿ ಗಣನಾಥ ಶೆಟ್ಟಿಯವರು ಹಾಗೂ ಶ್ರೀ ವಿಮಲ್ ರಾಜ್ ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ತ್ರಿಶಾ ಫೌಂಡೇಶ್ ಅಧ್ಯಕ್ಷರಾದ ಪ್ರಭಾಕರ್ ಭಂಡಾರಿ, ಕಾರ್ಯದರ್ಶಿಗಳಾದ ಸರಿತಾ ಭಂಡಾರಿ ಹಾಗೂ ಟ್ರಸ್ಟಿ ಕಾರ್ತಿಕ್ ಭಂಡಾರಿಯವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರದ ರಾಮಕೃಷ್ಣ ಹೆಗಡೆಯವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೃಥ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು. ಧ್ವಜಾರೋಹಣ ಕಾರ್ಯಕ್ರಮದ ನಂತರ ಕ್ರಿಯೇಟಿವ್ ಸವಿಗಾನ ಶೀರ್ಷಿಕೆಯ ಅಡಿಯಲ್ಲಿ “ಮಾಸ್ಟರ್ ಡ್ರಾಮ ಆರ್ಟ್ಸ್” ಉಡುಪಿ, ಇವರಿಂದ ಸುಂದರ ದೇಶಭಕ್ತಿ ಮತ್ತು ಸದಭಿರುಚಿಯ ಗೀತ ಗಾಯನ ಕಾರ್ಯಕ್ರಮ ನೆರವೇರಲ್ಪಟ್ಟಿತು.
ಬ್ರಹ್ಮಾವರ: ಪ್ರತಿಷ್ಠಿತ ಬಾರ್ಕೂರು ರೋಟರಿ ಕ್ಲಬ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ ಶೆಟ್ಟಿ, ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ಪ್ರಮುಖರಾದ ಆನಂದ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಡುತ್ತಿರುವ ರತ್ನಾಕರ್ ಶೆಟ್ಟಿ ನಿವೃತ್ತ ಅರಣ್ಯ ಅಧಿಕಾರಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 20 ವರ್ಷ ಸೇನೆಯಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿರುವ ದಿನಕರ್ ಪೂಜಾರಿ ಅವರಿಗೆ ಕೂಡ ಈ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಅವರಿಗೂ ಸನ್ಮಾನವನ್ನು ಮಾಡಲಾಯಿತು. ಅನೇಕ ಜನ ಈ ವೇದಿಕೆಯಲ್ಲಿ ಭಾಗವಹಿಸಿದ್ದರು. ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ಮಾಡಲಾಗಿದ್ದು, ಹಾಗೆಯೇ ಸೈನಿಕರಿಗೆ ಗೌರವಾರ್ಪಣೆ ಮಾಡಲಾಯಿತು. ಮಹಿಳೆಯರು, ಹೆಣ್ಣು ಮಕ್ಕಳು ಕೂಡ ಕೇಸರಿ,ಬಿಳಿ, ಹಸಿರಿನ ದುಪ್ಪಟ್ಟವನ ಧರಿಸಿ ಈ ಕಾರ್ಯಕ್ರಮದ ರಂಗನ್ನ ಹೆಚ್ಚಿಸಿದರು. ಇನ್ನು ಅನೇಕ ರೋಟರಿ ಸದಸ್ಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಭಿನ್ನ ಆಚರಣೆ ಮೂಲಕ ಗಮನ ಸೆಳೆಯಿತು.