-ಅಪಾಯ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧ
- ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ರಾಮನಾಥ್ ಕೋವಿಂದ್
ನವದೆಹಲಿ : 71ನೇ ಗಣರಾಜ್ಯೋತ್ಸವದ ಮುಂಚಿನ ದಿನದ ಭಾರತದ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ, ಚೀನಾದ ವಿಸ್ತರಣಾವಾದಕ್ಕೆ ಉತ್ತರವೆಂಬಂತೆ ಮಾತನಾಡಿದ್ದು, ‘ಭಾರತವು ಶಾಂತಿಗೆ ಬದ್ಧವಾಗಿದೆ. ಆದರೆ, ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸದಾ ಸಿದ್ದವಾಗಿವೆ. ‘ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ಕಳೆದ ವರ್ಷ ನಾವು ಗಡಿಯಲ್ಲಿ ವಿಸ್ತರಣಾ ವಾದದ ಸವಾಲನ್ನು ಎದುರಿಸಿದ್ದು, ನಮ್ಮ ವೀರ ಯೋಧರು, ವಿರೋಧಿಗಳ ಉದ್ದೇಶ ವನ್ನು ವಿಫಲಗೊಳಿಸಿದ್ದರು. ಅವರಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಈ ಯೋಧರ ತ್ಯಾಗಕ್ಕೆ ಭಾರತವು ಎಂದಿಗೂ ಋಣಿಯಾಗಿರುತ್ತದೆ’ ಎಂದರು.
‘ಭಾರತ-ಚೀನಾ ಗಡಿಯಲ್ಲಿ ಒಂಬತ್ತು ತಿಂಗಳುಗಳಿಂದ ಉದ್ವಿಗ್ನತೆ ಇದೆ. ಮೈನಸ್ 50ರಿಂದ 60ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಾಲ್ವನ್ ಕಣಿವೆ ಯಿಂದ, ಜೈಸಲ್ಮೇರ್ನ 50ಡಿಗ್ರಿ ಸೆಲ್ಸಿಯಸ್ ನ ಸುಡುಬಿಸಿಲಿನ ಪ್ರದೇಶದವರೆಗೆ, ಭೂಮಿ, ಆಕಾಶ ಹಾಗೂ ವಿಸ್ತಾರವಾದ ಕರಾವಳಿಯುದ್ದಕ್ಕೂ ನಮ್ಮ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಅವರ ತ್ಯಾಗ, ದೇಶಭಕ್ತಿಯ ಬಗ್ಗೆ ಪ್ರತಿ ಭಾರತೀಯನಿಗೂ ಹೆಮ್ಮೆ ಇದೆ’ ಎಂದರು.
ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ರಾಷ್ಟ್ರಪತಿ ‘ಮೂರು ಕೃಷಿ ಕಾಯ್ದೆಗಳ ಬಗ್ಗೆ ರೈತರು ಭಯಪಡುವ ಅಗತ್ಯವಿಲ್ಲ. ಸುಧಾರಣೆಯ ಹಾದಿಯ ಆರಂಭದಲ್ಲಿ ಕೆಲವು ತಪ್ಪುಗ್ರಹಿಕೆಗಳು ಹುಟ್ಟಿಕೊಂಡಿರಬಹುದು. ಆದರೆ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಹೇಳಿದರು.