ಕರಾವಳಿ ಟಾಪ್ ನ್ಯೂಸ್
ಕರಾವಳಿಯಲ್ಲಿ ಮತ್ತೆ ಎಚ್ಚರಿಕೆ!
– ಮತ್ತೆ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ!
– ಬೆಳ್ತಂಗಡಿ: ರಬ್ಬರ್ ಬೆಳೆ ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ
– ಮಣಿಪಾಲ ರೈಲಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
NAMMUR EXPRESS NEWS
ಮಂಗಳೂರು: ರಾಜ್ಯದ ಕರಾವಳಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಸಾಧಾರಣ ಮಳೆಯಾದರೆ,ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು,ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೋಲಾರ-ಬೆಳಗಾವಿಯಲ್ಲಿ ಮಳೆ ಅಬ್ಬರ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಾ ಧರವಾಡ, ಬಾಗಲಕೋಟೆ, ಬೀದರ್, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು,ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಇನ್ನೂ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಸಾಧಾರಣದೊಂದಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
– ಬೆಳ್ತಂಗಡಿ : ರಬ್ಬರ್ ಬೆಳೆ ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ!!
ಬೆಳ್ತಂಗಡಿ: ಮೂರು ತಿಂಗಳುಗಳಿಂದ ರಬ್ಬರ್ ದರ ಚೇತರಿಕೆ ಹಾದಿಯಲ್ಲಿದ್ದು, ಇನ್ನೂ 10 ವರ್ಷ ಧಾರಣೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಪ್ರಿಲ್ ಆರಂಭದಲ್ಲಿ ಕೆ.ಜಿ.ಗೆ 195 ರೂ. ಇದ್ದ ಧಾರಣೆ, ಆ.28ಕ್ಕೆ 231 ರೂ. ತಲುಪಿದೆ. ಜಾಗತಿಕ ಮಟ್ಟದಲ್ಲಿ ರಬ್ಬರ್ ಇಳುವರಿ ಕೈಕೊಟ್ಟ ಪರಿಣಾಮ 1ಎಕ್ಸ್ ಗ್ರೇಡ್ ರಬ್ಬರ್ ಕೆ.ಜಿ. ಧಾರಣೆ 245 ರೂ. ತಲುಪಿದೆ. ಎಪ್ರಿಲ್ ಅವಧಿಯಲ್ಲಿ ರಬ್ಬರ್ ದರ ಏರುಮುಖ ಕಂಡಿದ್ದು, ಎ.8ಕ್ಕೆ ಕೆ.ಜಿ. ಒಂದಕ್ಕೆ 1ಎಕ್ಸ್ ಗ್ರೇಡ್ಗೆ 195 ರೂ. ತಲುಪಿತ್ತು. ಬಳಿಕ 200 ರೂ. ಗಡಿ ದಾಟಿ ಪ್ರಸ್ತುತ 1ಎಕ್ಸ್-245 ಹಾಗೂ 3-230 ಆಸುಪಾಸಿನಲ್ಲಿದೆ. ಸ್ಥಳೀಯವಾಗಿ 1ಎಕ್ಸ್ ಬಹಳ ವಿರಳವಾಗಿದ್ದು, ದೊಡ್ಡ ದೊಡ್ಡ ಎಸ್ಟೇಟ್ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದಂತೆ ಸ್ಥಳೀಯವಾಗಿ 3-4 ಗ್ರೇಡ್ ರಬ್ಬರ್ ಬೆಳೆಯಲಾಗುತ್ತದೆ. ಒಟ್ಟು 70 ರೀತಿಯ ವಸ್ತುಗಳಿಗೆ ರಬ್ಬರ್ ಉಪಯೋಗಿಸಲಾಗುತ್ತಿದೆ.
ಆದರೂ 2021-22ರಲ್ಲಿ 120 ರೂ. ತಲುಪಿದ್ದ ರಬ್ಬರ್ ಧಾರಣೆ ಕ್ರಮೇಣ 150 ಗಡಿಯಲ್ಲೇ ಇದ್ದು, ಕೃಷಿಕರನ್ನು ರಬ್ಬರ್ ಬೆಳೆಯಿಂದಲೇ ವಿಮುಖಗೊಳಿಸುವಂತಿತ್ತು. ಪ್ರಸಕ್ತ ಉತ್ತಮ ಧಾರಣೆ ಕಂಡುಕೊಂಡ ಪರಿಣಾಮ ರಬ್ಬರ್ ಬೆಳೆಗಾರರು ಸಂತಸದಲ್ಲಿದ್ದಾರೆ. ಆದರೆ ಈ ಅವಧಿಯಲ್ಲಿ ರಬ್ಬರ್ ಇಳುವರಿ ಕಡಿಮೆ ಇರುವುದರಿಂದ, ಶೇಖರಿಸಿಟ್ಟ ಬೆಳೆಗಾರರು ಬಂಪರ್ ಲಾಭ ಗಳಿಸಿದ್ದಾರೆ. ಚೀನ, ಅಮೆರಿಕ ಮತ್ತು ಯುರೋಪ್ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಅಷ್ಟು ರಬ್ಬರ್ ಪೂರೈಕೆಯಾಗುತ್ತಿ್ಲ.
ರೈಲಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ
ಮಣಿಪಾಲ : ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯ ಪೊಲೀಸರು ಆರೋಪಿ ಭಟ್ಕಳದ ನಿವಾಸಿ ಮೊಹಮ್ಮದ್ ಶುರೈಮ್(22)ನನ್ನು 20 ಗಂಟೆಯೊಳಗೆ ಕೇವಲ ಫೋಟೊದ ಆಧಾರದಲ್ಲಿ ಬಂಧಿಸಿದ್ದಾರೆ. ಉಡುಪಿಯ ಗುಡ್ಡೆಯಂಗಡಿಯ ನಿವಾಸಿ ಬೆಂಗಳೂರಿನಲ್ಲಿ ಐಟಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಯುವತಿ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ ರೈಲು ಹತ್ತಿದ್ದರು.ರೈಲು ಮೂಲ್ಕಿ ದಾಟಿದ ಬಳಿಕ ಆಕೆಗೆ ಆರೋಪಿ ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದು,ಬಳಿಕ ಗಲಾಟೆ ನಡೆದು ಕ್ಷಮೆ ಯಾಚಿಸಿದ್ದ. ಕೂಡಲೇ ಯುವತಿ ಆತನ ಚಿತ್ರ ತೆಗೆದು ರೈಲ್ವೇ ಆ್ಯಪ್ ಮೂಲಕ ದೂರು ನೀಡಿದ್ದರು. ನಂತರ ಉಡುಪಿ ರೈಲು ನಿಲ್ದಾಣಕ್ಕೆ ಬಂದ ಬಳಿಕ ರೈಲ್ವೇ ಪೊಲೀಸರಿಗೂ ದೂರು ನೀಡಿದ್ದರು. ರೈಲ್ವೇ ಪೊಲೀಸರು ಇದನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಿದರು. ಈ ನಡುವೆ ರೈಲ್ವೇ ಆ್ಯಪ್ ಮೂಲಕ ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಕಾರ್ಯಾಚರಣೆಗೆ ಇಳಿದು ಅರೋಪಿಯನ್ನು ಬಂಧಿಸಿದ್ದಾರೆ.
–