ಕಾರ್ಕಳ ಪುರಸಭೆಗೆ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ , ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆ
– ಬಿಜೆಪಿ ಆಡಳಿತ ಪಡೆದ ಕಾರ್ಕಳ ಪುರಸಭೆ: ಅಭಿನಂದನೆಗಳು
NAMMUR EXPRESS NEWS
ಕಾರ್ಕಳ: ಕಾರ್ಕಳ ಪುರಸಭೆಯ ನೂತನ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅಧಿಕಾರವನ್ನು ಮತ್ತೆ ಬಿಜೆಪಿ ಉಳಿಸಿಕೊಂಡಿದೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆ. 30ರಂದು ಚುನಾವಣೆ ನಡೆದಿದ್ದು,
23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಒರ್ವರು ಪಕ್ಷೇತರ ಸದಸ್ಯರಿದ್ದಾರೆ.
ಯಾರು ಯಾರು ನಾಮಪತ್ರ ಸಲ್ಲಿಸಿದ್ದರು?
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ, ಕಾಂಗ್ರೆಸ್ ಸಮ ಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಕಿಂಗ್ ಮೇಕರ್ ಆಗಬೇಕಿತ್ತು. ಆದರೆ, ಅವರು ಮತ ಚಲಾವಣೆ ಮಾಡಲಿಲ್ಲ.
ಇನ್ನು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ಪರಿಗಣನೆಗೆ ಇರುವುದರಿಂದ ಅವರ ಮತವೇ ನಿರ್ಣಾಯಕವಾಗಿತ್ತು. ಹೀಗಾಗಿ 13 ಮತಗಳೊಂದಿಗೆ ಬಿಜೆಪಿ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ತಹಶೀಲ್ದಾರ್ ಪ್ರತಿಭಾ ಆರ್. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.