ಟಾಪ್ 4 ನ್ಯೂಸ್ ಕರಾವಳಿ
ಕುಕ್ಕೆ ಸುಬ್ರಹ್ಮಣ್ಯ ಲಡ್ಡು ಅವ್ಯವಹಾರದ ತನಿಖೆ?!
– ಮೂಡುಬಿದ್ರೆ: ರಸ್ತೆಯಲ್ಲೇ ಯುವತಿಗೆ ಹಲ್ಲೆ: ಆರೋಪಿ ಅರೆಸ್ಟ್!
– ಉಡುಪಿ: ಕನ್ನಡದಲ್ಲೇ ಮಾತನಾಡಿ ಹಣ ವಂಚನೆಗೆ ಯತ್ನ
– ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿಗೆ ಎಚ್ಚರಿಕೆ ನೀಡಿದ ಕೋರ್ಟ್
NAMMUR EXPRESS NEWS
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಅವವ್ಯವಹಾರ ನಡೆದಿರುವ ಶಂಕೆ ಹಿನ್ನೆಲೆ ನಾಲ್ವರು ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ಸಿಬ್ಬಂದಿಗಳ ಕರ್ತವ್ಯ ಬದಲಿಸಲಾಗಿದೆ ಎನ್ನಲಾಗಿದೆ.
ಲಡ್ಡು ತಯಾರಿಕೆಯಾಗಿರುವ ಸಂಖ್ಯೆ ಮತ್ತು ಅದರ ವಿತರಣೆಯಲ್ಲಿ ಸಾಮ್ಯತೆ ಇಲ್ಲದೇ ರಶೀದಿ ಮತ್ತು ಇತರೇ ಹೆಚ್ಚುವರಿ ಲಡ್ಡು ವಿತರಣೆ ಆಗಿರುವುದರ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಲಡ್ಡು ಪ್ರಸಾದದ ಬಗ್ಗೆ ಬಂದ ದೂರನ್ನು ಪರಿಗಣಿಸಿ ದೇಗಲದ ಆಡಳಿಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ರವರ ಆದೇಶದ ಮೇರೆಗೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕ್ರಮ ಕೈಗೊಂಡಿದ್ದಾರೆ.
ಲಡ್ಡು ಪ್ರಸಾದ ನೀಡುವ ಕೌಂಟರ್ ನಲ್ಲಿ ರಶೀದಿ ನೀಡಿದವರಿಗೆ ಮಾತ್ರ ಪ್ರಸಾದ ನೀಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿಗಳು ಮರು ಆದೇಶ ನೀಡಿರುವುದಾಗಿ ತಿಳಿದು ಬಂದಿದೆ. ಅವ್ಯವಹಾರ ಆಗಿರುವ ಸ್ಥಳದಲ್ಲಿ ಹಾಗೂ ಲಡ್ಡು ತಯಾರಿಕೆ ಮಾಡುವ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂಡುಬಿದ್ರೆ: ರಸ್ತೆಯಲ್ಲೇ ಯುವತಿಗೆ ಹಲ್ಲೆ: ಆರೋಪಿ ಅರೆಸ್ಟ್!
ಮೂಡುಬಿದ್ರಿ: ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ಹಲ್ಲೆಗೈದ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯಲ್ಲಿ ಗುರುವಾರ ನಡೆದಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇರುವೈಲಿನ ಅರ್ಶದ್ (21) ಎಂದು ಗುರುತಿಸಲಾಗಿದೆ.ಮೂಡುಬಿದ್ರಿಯ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಕೋಟೆಬಾಗಿಲಿನ ವಾಸವಾಗಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದು, ಮುಂದೆ ಅವರಿಬ್ಬರ ನಡುವೆ ಹಲವು ಬಾರಿ ಫೋನ್ ಸಂಭಾಷಣೆ ನಡೆದಿತ್ತೆಂಬ ವಿಚಾರವೂ ಬಯಲಾಗಿದೆ. ಕೋಟೆಬಾಗಿಲಿನ ಯುವತಿ ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆ ರಸ್ತೆಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಅರ್ಶದ್ ನೊಂದಿಗೆ ಫೋನ್ ಸಂಭಾಷಣೆಯ ಎಡವಟ್ಟಿನಿಂದಾಗಿ ಮನೆಮಂದಿ ಆಕೆಯನ್ನು ಕೆಲಸಕ್ಕೆ ಕಳುಹಿಸದೆ ಮನೆಯಲ್ಲಿ ಇರಿಸಿದ್ದರು.
ಈ ನಡುವೆ ಆಕೆಯನ್ನು ಉಡುಪಿಯಲ್ಲಿ ಇರುವ ಆಕೆಯ ಸಹೋದರಿಯ ಮನೆಗೆ ಹೆತ್ತವರು ಕಳುಹಿಸಿಕೊಟ್ಟಿದ್ದರು. ಕಳೆದ ಕೆಲ ದಿನಗಳ ಹಿಂದೆ ಆಕೆ ಊರಿಗೆ ಹಿಂದಿರುಗಿದ್ದು, ಗುರುವಾರ ಸಂಜೆ ಮೂಡುಬಿದಿರೆ ಪೇಟೆ ಹೋಗಿದ್ದ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯ ಬಳಿ ಟೈಲರ್ ಅಂಗಡಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಯುವತಿಯನ್ನು ಅಡ್ಡಗಟ್ಟಿದ್ದೆ.ಮೊಬೈಲ್ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ತೋರುತ್ತಿರುವ ಹಾಗೂ ತನ್ನನ್ನು ತಿರಸ್ಕರಿಸುತ್ತಿರುವ ಕುರಿತು ಅಕ್ಷೇಪ ವ್ಯಕ್ತ ಪಡಿಸಿದ ಆರೋಪಿ ಅರ್ಶದ್ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ್ದಾನೆ. ಕಾರ್ಯಪ್ರವೃತ್ತರಾದ ಮೂಡಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಗೆ ಅಗತ್ಯ ರಕ್ಷಣೆ ನೀಡಲು ಪೊಲೀಸರು ಬದ್ದರೆಂದು ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡದಲ್ಲೇ ಮಾತನಾಡಿ ವಂಚನೆಗೆ ಯತ್ನ!
ಉಡುಪಿ, ಉಡುಪಿ ಕಟಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ.
ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಕೀಲನೆಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ಆತ ‘ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್ ಗೆ ಹಾಜರಾಗಬೇಕು’ ಎಂದಿದ್ದಾನೆ. ಜೊತೆಗೆ ಸಾಲದ ಕಂತನ್ನು ಗೂಗಲ್ ಪೇ ಮಾಡುವಂತೆ ಒತ್ತಡ ಹಾಕಿದ್ದಾನೆ. ಕರೆ ಬಂದಿರುವ ನಂಬರ್ 8792701216 ಆಗಿದ್ದು ಟ್ರೂ ಕಾಲರ್ನಲ್ಲಿ ನಾಗ ಆರ್. ಎಂದು ಹೆಸರು ತೋರಿಸುತ್ತಿದೆ.ಬಳಿಕ ಆ ವ್ಯಕ್ತಿಯು ‘ಏ ಚಂದ್ರ ಕೂಡಲೇ ಕೋರ್ಟ್ ಗೆ ಬಾ. ಎಷ್ಟು ಹೊತ್ತಿನಲ್ಲಿ ಬರುತ್ತೀ..’ ಎಂದು ಪ್ರಶ್ನಿಸಿದ್ದು, ನಂತರ ಸಾಲ ನೀಡಿದ ಮ್ಯಾನೇಜರ್ ಅವರೊಂದಿಗೂ ಮಾತನಾಡುವಂತೆ ಹೇಳಿ ಇನ್ನೊಬ್ಬನಿಗೆ ಮೊಬೈಲ್ ಹಸ್ತಾಂತರಿದ್ದಾನೆ. ನಂತರ ಮ್ಯಾನೇಜರ್ ಎಂಬ ವ್ಯಕ್ತಿ ಮಾತನಾಡಿ, ತಾಂತ್ರಿಕ ಸಮಸ್ಯೆ ಇರುವುದರಿಂದ ಸಾಲದ ಕಂತು ಅಟೋ ಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಪಾವತಿ ಆಗುತ್ತಿಲ್ಲ. ಕೂಡಲೇ ಗೂಗಲ್ ಪೇ ಮೂಲಕ ಪಾವತಿ ಮಾಡಿ’ ಎಂದು ಆತನೂ ಒತ್ತಡ ಹೇರಿದ್ದಾನೆ.
ಇದು ವಂಚಕರ ಕರೆಯೆಂದು ಅರಿತ ಂದ್ರ ಪೂಜಾರಿ ಅವರು, ನನ್ನ ಸಾಲದ ಕಂತು ಬಾಕಿ ಇಲ್ಲ. ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಿಮ್ಮ ಕಚೇರಿ ಉಡುಪಿಯಲ್ಲಿ ಎಲ್ಲಿದೆ?’ ಎಂದು ಕೇಳಿದಾಗ ತಡವರಿಸಿದ ವ್ಯಕ್ತಿಯು ಲೊಕೇಷನ್ ಕಳಿಸುತ್ತೇನೆ’ ಎಂದು ಹೇಳಿ ಕರೆ ಕಡಿತ ಮಾಡಿದ್ದಾನೆ. ನಂತರ ಚಂದ್ರು ತನ್ನ ವಾಹನಕ್ಕೆ ಸಾಲ ನೀಡಿದ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ತಮ್ಮ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಮತ್ತು ಅವರ ಸಾಲದ ಯಾವುದೇ ಕಂತು ಬಾಕಿ ಉಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಗೆ ಎಚ್ಚರಿಕೆ ನೀಡಿದ ಕೋರ್ಟ್
ಬೆಳ್ತಂಗಡಿ: ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ ಇದೀಗ ಇನ್ನುಳಿದಂತೆ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ ಇದೇ ಆಗಸ್ಟ್ 29 ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಕುದ್ದು ಹಾಜರಾತಿ ಗೆ ಆದೇಶ ಮಾಡಿತ್ತು. ಅದರಂತೆ ನ್ಯಾಯಾಲಯದ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಹಾಜರಾಗಿದ್ದಾರೆ.
ತಿಮರೋಡಿ ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಮೀರಿ ವರ್ತಿಸುವುದರ ಬಗ್ಗೆ ಗರಂ ಆದ ನ್ಯಾಯಾಧೀಶರು ಇನ್ನೊಂದು ಬಾರಿ ಹೀಗೆ ಮಾಡಿದ್ರೆ, ಬಂಧಿಸಿ ಕಾನೂನು ಕ್ರಮ ಜರಗಿಸುವ ಮೌಖಿಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಂಗ ನಿಂದನೆ ಮಾಡಿ ನ್ಯಾಯಲಯದಲ್ಲಿ ಬಂದು ಸುಳ್ಳು ಹೇಳಿದ್ರೆ ನಾರ್ಕೋಟಿಕ್ಸ್ ಪರೀಕ್ಷೆಗೆ ಆದೇಶ ಮಾಡ್ತೇನೆ ಎಂದು ಎಚ್ಚರಿಸಿದ್ದಾರೆ.