ತುಳು ಲಿಪಿ ಈಗ ವಿಶ್ವದ ಎಲ್ಲಾ ಕಡೆ ಲಭ್ಯ!
– ಯುನಿಕೋಡ್’ಗೆ ಸೇರ್ಪಡೆ: ಈಡೇರಿದ ಬಹು ವರ್ಷಗಳ ಕನಸು!
– ತಜ್ಞರ ಸತತ ಮನವಿ ನಂತರ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ
NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿಯ ಹೆಮ್ಮೆಯ ಭಾಷೆ ತುಳು ಈಗ ವಿಶ್ವವ್ಯಾಪಿ ಸಿಗಲಿದೆ. ಈ ಮೂಲಕ ತುಳು ನಾಡಿಗೆ ಸಿಹಿ ಸುದ್ದಿ ಸಿಕ್ಕಿದೆ.
ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ “ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ.
ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ.
ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ.
ಯುನಿಕೋಡ್ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪರೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು
ಟೆಕ್ಸ್ಟ್,ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ಇವೆಲ್ಲ ವನ್ನೂ ಮಾಡಲು ಸಾಧ್ಯವಾಗಲಿದೆ. ಗೂಗಲ್ನಲ್ಲಿ ಈಗಾಗಲೇ ಇಂಗ್ಲಿಷ್ ಟು ತುಳು ಟ್ರಾನ್ಸ್ಲೇಶನ್ ಒದಗಿರುವ ಕಾರಣ ಯುನಿಕೋಡ್ನಲ್ಲಿ ಹಲವು ಸಾಧ್ಯತೆಗಳು ಮುಂದಿನ ದಿನಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆ ಮೂಡಿದೆ.
* ಈಡೇರಿದ ಬಹು ವರ್ಷಗಳ ಕನಸು!
ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ತಜ್ಞರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ 2017ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅವರು ವಿಷಯ ಸಮನ್ವಯಕ್ಕಾಗಿ ತಜ್ಞರ ಸಮಿತಿ ರಚಿಸಿದ್ದರು, ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ಅನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.
ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ. ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ. ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್. ವಿಘ್ನರಾಜ್, ಆಕಾಶ್ ರಾಜ್ ಸಹಿತ ಅನೇಕರು ಕೊಡುಗೆ ನೀಡಿದ್ದಾರೆ. ಈ ಮೂಲಕ ಜಾಗತಿಕವಗಿ ತಳು ಲಿಪಿಯ್ಲಿ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ ಎಂದವರು ತಿಳಿಸಿದ್ದಾರೆ.
ಯುನಿಕೋಡ್ನಲ್ಲಿ ಬಂದ ತುಳು ಅಕ್ಷರಗಳನ್ನು ಒಳಗೊಂಡ, ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್ಟೈಪ್ ಫಾಂಟ್ ತಯಾರಿ, ತುಳು ಯುನಿಕೋಡ್ ಪ್ರಕಾರ ಮಾಹಿತಿ ಊಡಿಸಲು ಒಂದು ಕೀಬೋರ್ಡ್ ತಂತ್ರಾಂಶ ಹಾಗೂ ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶ ಅಗತ್ಯವಾಗಿ ಇನ್ನು ಮುಂದೆ ಬೇಕಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಥವಾ ಮಂಗಳೂರು ವಿ.ವಿ.ಯ ತುಳು ಅಧ್ಯಯನ ಪೀಠ ಇದನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕಾಗಿದೆ.