ಕರಾವಳಿ ಸರ್ಕಾರಿ ಶಾಲೆಗಳಿಗೆ ಸೋಲಾರ್ ಬೆಳಕು ಭಾಗ್ಯ!
– ಸೆಲ್ಕೋ ಕಂಪನಿ ಸಹಭಾಗಿತ್ವದಲ್ಲಿ ಶಾಲೆಗಳಿಗೆ ಸೋಲಾರ್
– ಸರಕಾರಿ ಆಯುರ್ವೇದ ಕಾಲೇಜುಗಳಿಗೆ ಬೇಡಿಕೆ
– ಎಂಬಿಬಿಎಸ್ ವಿದ್ಯಾರ್ಥಿವೇತನ ಪ್ರಕಟಣೆ: ಯಾರಿಗೆ ಸಿಗುತ್ತೆ?
NAMMUR EXPRESS NEWS
ಕುಂದಾಪುರ: ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಬಳಿಕ, ಈಗ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲೂ ಸೌರಶಕ್ತಿಯ ಸದ್ಬಳಕೆಗೆ ಯೋಜನೆ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ.
ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಸೆಲ್ಕೋ ಸೋಲಾರ್ ಫೌಂಡೇಶನ್ ನೇತೃತ್ವದಲ್ಲಿ ಬೆಂಗಳೂರು ಮೂಲದ ಕ್ಯಾನ್ಫಿನ್ ಹೋಮ್ಸ್ ಸಂಸ್ಥೆಯ ಸಹಯೋಗದಲ್ಲಿ ಹಕ್ಲಾಡಿ ಸರಕಾರಿ ಪ್ರೌಢಶಾಲೆ, ಕಕ್ಕುಂಜೆ ಸರಕಾರಿ ಶಾಲೆಯನ್ನು ಸಂಪೂರ್ಣ ಸೋಲಾರ್ ಸ್ವಾವಲಂಬಿಯನ್ನಾಗಿ ಮಾಡಲಾಗಿದೆ.
ಈ ವರ್ಷ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ 25 ಸರಕಾರಿ ಶಾಲೆಗಳಲ್ಲಿ ಸಂಪೂರ್ಣ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಗುರಿ ಹಂದಲಗದೆ.
ಬ್ರಹ್ಮಾವರ ವಲಯದ ಹಾಲಾಡಿ ಸಮೀಪದ 110 ಮಕ್ಕಳಿರುವ ಕಕ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 5.16 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಶಕ್ತಿಯನ್ನು ಅನುಷ್ಠಾನಗೊಳಿಸಲಾಗಿದೆ.
200 ಎಎಚ್ನ 8 ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, 6 ಕೆ.ವಿ. ಸೌರಶಕ್ತಿ ಸೌಲಭ್ಯ ಸಿಗಲಿದೆ. ಇದರಿಂದ ಫ್ಯಾನ್, ಬೆಳಕಿನ ವ್ಯವಸ್ಥೆ, ಬಿಸಿಯೂಟ ತಯಾರಿಗೆ ಮಿಕ್ಸಿ ಬಳಕೆ, ಮೋಟಾರು ಪಂಪ್ ಬಳಕೆ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಲ್ಯಾಬ್ಗಳಿಗೆ ಸೌರಶಕ್ತಿಯೇ ಬಳಕೆಯಾಗಲಿದೆ. ಇದರಿಂದ ಮಾಸಿಕವಾಗಿ ಬರುತ್ತಿದ್ದ 3 ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ.
* ಕರಾವಳಿ ಭಾಗದಲ್ಲಿ ಸರಕಾರಿ ಆಯುರ್ವೇದ ಕಾಲೇಜುಗಳಿಗೆ ಬೇಡಿಕೆ
ಮಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಬರುವ ದ.ಕ. ಜಿಲ್ಲೆಗೆ ಸರಕಾರಿ ಆಯುರ್ವೇದ ಕಾಲೇಜು (ಬೋಧಕ ಆಸ್ಪತ್ರೆ ಸಹಿತ) ಒದಗಿಸಬೇಕು ಎನ್ನುವ ಬೇಡಿಕೆ ಈಗ ಮತ್ತಷ್ಟು ಬಲಗೊಳ್ಳುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ 100 ವರ್ಷ ಹಳೆಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು (160 ಬೆಡ್), 75 ವರ್ಷ ಹಳೆಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು (180 ಬೆಡ್), ತಾರಾನಾಥ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬಳ್ಳಾರಿ (150) ಕಾರ್ಯ ನಿರ್ವಹಿಸುತ್ತಿದೆ. ಹಾವೇರಿಯ ಸವಣೂರಿನಲ್ಲಿ ಸರಕಾರಿ ಆಯುರ್ವೇದ ಮಹಾವಿದ್ಯಾಲಯ (150) ಪ್ರಸ್ತಾವನೆಯಲ್ಲಿದೆ. ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ನಿರ್ಮಾಣ ಹಂತದಲ್ಲಿದ್ದು,ಇದು ಬಿಟ್ಟರೆ ಬೇರೆ ಯಾವುದೇ ಪ್ರಸ್ತಾವನೆ ಕಂಡುಬಂದಿಲ್ಲ. ಕರಾವಳಿಯಲ್ಲಿ ಇದುವರೆಗೆ ಯಾವುದೇ ಬೇಡಿಕೆ ಇರಲಿಲ್ಲ. ಕೆಲವು ಖಾಸಗಿ ಆಯುರ್ವೇದ ಕಾಲೇಜುಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ.
ಆಯುರ್ವೇದ ಪದ್ಧತಿಯಲ್ಲಿ ಯಾವುದೇ ಅಡ್ಡ ಪರಿಣಾಮ ವಿಲ್ಲದೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಸದ್ಯ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗೆಟಕುವ ದರದಲ್ಲಿ ಯುರ್ವೇದ ಚಿಕಿತ್ಸೆಗೆ ಕರಳವನ್ನೇ ಅವಲಂಬಿಸುವಂತಾಗಿದೆ.
* ಎಂಬಿಬಿಎಸ್ ಸ್ಟೂಡೆಂಟ್ಗಳಿಗೆ ವಿದ್ಯಾರ್ಥಿವೇತನ ಪ್ರಕಟಣೆ
ಬೆಂಗಳೂರು: ಡಾ ಪಿ ಎಸ್ ಶಂಕರ ಪ್ರತಿಷ್ಠಾನ 2024-29 ರ ಬ್ಯಾಚ್ನ ವಿದ್ಯಾರ್ಥಿವೇತನ ಕುರಿತು ಪ್ರಕಟಣೆ ಹೊರಡಿಸಿದೆ. ಈ ಬ್ಯಾಚ್ಗೆ ಎಂಬಿಬಿಎಸ್ ಕೋರ್ಸ್ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2024-29 ರ ಬ್ಯಾಚ್ನ ಎಂಬಿಬಿಎಸ್ ಸ್ಟೂಡೆಂಟ್ಗಳಿಗೆ 54 ತಿಂಗಳ ಅವಧಿಗೆ (ಕೋರ್ಸ್ ಅಂತ್ಯದವರೆಗೆ) ನೀಡುವ ಮಾಸಿಕ 1,500 ರೂ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ನವೆಂಬರ್ನಿಂದ ಎಂಬಿಬಿಎಸ್ಗೆ ಸೇರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.
ಡಾ ಪಿ ಎಸ್ ಶಂಕರ ಪ್ರತಿಷ್ಠಾನದ ವಿದ್ಯಾರ್ಥಿವೇತನವನ್ನು ಪ್ರತಿವರ್ಷ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಸಿಕ ನೀಡಲಾಗುತ್ತದೆ.
ಅರ್ಜಿಯನ್ನು ಪ್ರತಿಷ್ಠಾನದ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 10 ರೊಳಗೆ ಸಲ್ಲಿಸಬೇಕಾಗಿದೆ.