ಈಶ್ವರ ಮಲ್ಪೆ ಕುಟುಂಬಕ್ಕೆ 1ಲಕ್ಷ ಮೊತ್ತದ ಚೆಕ್!
– ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ಜೀವ ಉಳಿಸಿದ!
* ಮಂಗಳೂರು: ನೀರುಪಾಲು ಘಟನೆ, ಓರ್ವ ಯುವಕನ ಮೃತದೇಹ ಪತ್ತೆ!
* ಕಾರ್ಕಳ:ಕಂಟೈನರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
* ಬಂಟ್ವಾಳ:ಮನೆಗೆ ಬಡಿದ ಸಿಡಿಲು: ಅಪಾರ ಹಾನಿ
NAMMUR EXPRESS NEWS
ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಅಪದ್ಭಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾರ್ ಪುತ್ತಿಲ ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು.
ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ.ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಮಂಗಳೂರು: ನೀರುಪಾಲು ಘಟನೆ, ಓರ್ವ ಯುವಕನ ಮೃತದೇಹ ಪತ್ತೆ!
ಮಂಗಳೂರು: ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ.
ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹ ಸೆ. 30ರಂದು ಬೆಳಗ್ಗೆ ಪತ್ತೆಯಾಗಿದೆ. ಅನೀಶ್ ಅವರ ಮೃತದೇಹವನ್ನು ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್ (20) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೆಳಗ್ಗೆ ಬೆಂಗ್ರೆಯಿಂದ ಮುಳುಗು ತಜ್ಞರು ಆಗಮಿಸಿ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಮುಳುಗು ತಜ್ಞರೊಂದಿಗೆ ಅಗ್ನಿಶಾಮಕ ದಳದವರೂ ಕಾರ್ಯಾಚರಣೆ ನಡೆಸುತ್ತಿದ್ದರು. ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್. ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಇದ್ದರು.
ಕಾರ್ಕಳ: ರಸ್ತೆ ದಾಟುವ ವೇಳೆ ಕಂಟೈನರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಕಾರ್ಕಳ: ತಾಲೂಕಿನ ಬೈಲೂರಿನಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೆ. 30ರಂದು ಸಂಭವಿಸಿದೆ. ಮೃತರು ಯರ್ಲಪ್ಪಾಡಿಯ ವಸಂತ ಆಚಾರ್ಯ (64). ಇವರು ಬೈಲೂರಿನಲ್ಲಿ ಬಸ್ನಿಂದ ಇಳಿದು ರಸ್ತೆ ದಾಟುತ್ತಿದ ಸಂದರ್ಭ ಉಡುಪಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಲಾರಿ ವಸಂತ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ವಸಂತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬಂಟ್ವಾಳ: ಮನೆಗೆ ಸಿಡಿಲು,ಅಪಾರ ಹಾನಿ
ಬಂಟ್ವಾಳ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ಹಾನಿಯುಂಟಾದ ಘಟನೆ ಬಂಟ್ವಾಳದ ಉರುವಾಲು ಗ್ರಾಮದ ಸೆ. 30ರಂದು ಸಂಜೆ ನಡೆದಿದೆ.
ತಾರಿದಡಿ ನಿವಾಸಿ ಸೇಸಪ್ಪ ಅವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಇದರೊಂದಿಗೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸಿಡಿಲು ಬಡಿದ ಸಂದರ್ಭದಲ್ಲಿ ಸೇಸಪ್ಪ ಗೌಡರು ಮಕ್ಕಳನ್ನು ಶಾಲೆಯಿಂದ ಕರೆದು ಬರಲು ತೆರಳಿದ್ದರು. ಹೀಗಾಗಿ ಸಂಭವನೀಯ ಅಪಾಯ ತಪ್ಪಿ. ಇನ್ನು ಸಿಡಿಲು ಬಡಿದ ಪರಿಣಾಮ 9 ವರ್ಷಗಳ ಹಿಂದೆ ಕಟ್ಟಿದ್ದ ಈ ಮನೆಯ ಸಂಪೂರ್ಣ ಹಾನಿಗೀಡಾಗಿದೆ ಎಂದು ಸೇಸಪ್ಪ ಅವರು ಹೇಳಿದ್ದಾರೆ