ಮೈಸೂರು ದಸರಾ ಎಷ್ಟೊಂದು ಸುಂದರ..!
– ದಸರಾ ಸಂಭ್ರಮ ಶುರು: ನಾಡ ಹಬ್ಬಕ್ಕೆ ಸ್ವಾಗತ
– ಕಳೆಗಟ್ಟಿದ ದಸರಾ: ದಸರಾ ಯಾವತ್ತು ಏನೇನು..?
ವಿಶೇಷ ವರದಿ: ದಿವ್ಯಶ್ರೀ ದಾಸ್
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದಾಕ್ಷಣ ನೆನಪಾಗುವುದು ನಾಡ ಹಬ್ಬ ದಸರಾ. ಈ ಬಾರಿಯ ದಸರಾ ಸಂಭ್ರಮಾಚರಣೆಯನ್ನು ಬಹಳ ಅದ್ದೂರಿಯಾಗಿ ಮಾಡಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಮೈಸೂರು ದಸರಾ ಸ್ವಾಗತಕ್ಕೆ ಸಿದ್ಧವಾಗಿದೆ.
ಮೈಸೂರಿನಲ್ಲಿ ದಸರಾ ಆಚರಣೆಗಳು ಗುರುವಾರ, 3 ನೇ ಅಕ್ಟೋಬರ್ 2024 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಅಂತಿಮ ದಿನ ವಿಜಯದಶಮಿಯು ಶನಿವಾರ , 12 ನೇ ಅಕ್ಟೋಬರ್ 2024 ರಂದು ನಡೆಯಲಿದೆ.
ಜಂಬೂ ಸವಾರಿ ಮತ್ತು ಪಂಜಿನ ಮೆರವಣಿಗೆ, ಅಂತಿಮ ದಿನದ ದಸರಾದ ಎರಡು ಪ್ರಮುಖ ಆಕರ್ಷಣೆಗಳಾಗಿವೆ. ದಸರಾ ಸಂಭ್ರಮ ಕಣ್ಣು ತುಂಬಿಕೊಳ್ಳಲು ರಾಜ್ಯ, ದೇಶ, ವಿದೇಶಗಳಿಂದ ಲಕ್ಷ ಲಕ್ಷ ಜನ ಆಗಮಿಸಲಿದ್ದಾರೆ.
ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು!
ಮೈಸೂರಿನ ರಾಜಮನೆತನದವರು ದಸರಾ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ದಸರಾ ಸಂದರ್ಭದಲ್ಲಿ, ಇಡೀ ನಗರವು ಸಂತೋಷದಿದ ಅಲಂಕೃತಗೊಂಡು ,ವಿದ್ಯುತ್ ದೀಪಗಳಿಂದ ಅರಮನೆ ನಗರಿ ಮೈಸೂರು ಜಗಮಗಿಸುತ್ತದೆ .
ಅರಮನೆಯಲ್ಲಿ ಖಾಸಗಿ ದರ್ಬಾರ್!
ಅರಮನೆಯಲ್ಲಿ ಚಿನ್ನದ ಸಿಂಹಾಸನ ಜೋಡಣೆ ಮಾಡುವ ಕೈಂಕರ್ಯ ಈಗಾಗಲೇ ನೆರವೇರಿದ್ದು, ಪ್ರತಿ ವರ್ಷದಂತೆ ಮಹಾರಾಜರು ನಡೆಸಿಕೊಡುವ ಖಾಸಗಿ ದರ್ಬಾರ್ ಅನ್ನು ನಡೆಸಲು ಸರ್ವರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಅರಮನೆಯಲ್ಲಿ ಖಾಸಗಿ ದರ್ಬಾರ್ ಬಳಿಕ ದಸರಾ ಸಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಅರಮನೆಯ ದರ್ಬಾರ್ ಹಾಲ್ ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನೆರವೇರಿಸಲಾಯಿತು. ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅರಮನೆ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ನಡೆದ ಚಿನ್ನದ ಸಿಂಹಾಸನ ಜೋಡಣೆ ಕಾರ್ಯದ ವೇಳೆ ಹಾಜರಿದ್ದರು.
ಅ. 3ರಿಂದ ನವ ರಾತ್ರಿ ಶುರು
ಅ. 3ರಂದು ನವರಾತ್ರಿಯ ಶುಭಾರಂಭದ ದಿನವಾಗಿದ್ದು, ಮೊದಲಿಗೆ ಎಣ್ಣೆ ಶಾಸ್ತ್ರ ಕಾರ್ಯ ನೆರವೇರಲಿದೆ. ಬೆಳಿಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗುತ್ತದೆ. ಬೆಳಿಗ್ಗೆ 7.45 ರಿಂದ 8.45 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವಂಶದ ಮಹಾರಾಜ ಯದುವೀರ್ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ.
ಬೆಳಿಗ್ಗೆ 10.30 ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. ಬೆಳಿಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ. 11.35 ರಿಂದ 12.05 ರ ಒಳಗೆ ಯದುವೀರ್ ಒಡೆಯರ್ ಅವರ ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್ ಆರಂಭವಾಗಲಿದೆ. ಮಧ್ಯಾಹ್ನ 1.05 ರಿಂದ 1.30 ರ ಒಳಗೆ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತದೆ. ಇವೂ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳಿವೆ.
ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಮೋಟಾರ್ ಬೈಕ್ ರ್ಯಾಲಿ ನಡೆಯಲಿದೆ ಅಕ್ಟೋಬರ್ 9 ಬುಧವಾರ ಬೆಳಿಗ್ಗೆ 10.05 ರಿಂದ 10.35 ರ ಒಳಗೆ ಸಂಪ್ರದಾಯಬದ್ದವಾಗಿ ವಿದ್ಯಾ ದೇವತೆ ಸರಸ್ವತಿಯ ಪೂಜೆ ನೆರವೇರಲಿದೆ. ಅಕ್ಟೋಬರ್ 10 ಗುರುವಾರ ರಾತ್ರಿ ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನೆರವೇರಲಿದೆ.
ಅಕ್ಟೋಬರ್ 11 ರಂದು ಶುಕ್ರವಾರ ದುರ್ಗಾಷ್ಟಮಿಯ ವಿಧಿಗಳು ನಡೆಯಲಿವೆ. ಅದೇ ದಿನ ಮಹಾನವಮಿ ಆಚರಣೆಗಳೂ ನಡೆಯಲಿವೆ. ಅಂದು ಬೆಳಿಗ್ಗೆ 6 ಗಂಟೆಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ ನೆರವೇರಲಿದೆ. ಪಟ್ಟದ ಆನೆ, ಕುದುರೆ, ಹಸುಗಳು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. 6.40 ರಿಂದ 7.10 ರ ಒಳಗೆ ಖಾಸಾ ಆಯುಧಗಳನ್ನು ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ.
ಅ. 5ರಂದು ಏನೇನು ಕಾರ್ಯಕ್ರಮ?
ಅ. 5ರಂದು ಬೆ. 7 ಗಂಟೆಗೆ ಪಾರಂಪರಿಕ ಉಡುಗೆಯಲ್ಲಿ ದಂಪತಿಗಾಗಿ ಪಾರಂಪರಿಕ ಟಾಂಗಾ ಸವಾರಿಯನ್ನು ಟೌನ್ ಹಾಲ್ ನ ಮುಂಭಾಗದಲ್ಲಿ ಆಯೋಜಿಸಲಾಗಿದೆ. 9 ಗಂಟೆಗೆ ಕಾಳಿಂಗರಾವ್ ಸಭಾಂಗಣದಲ್ಲಿ ಯೋಗಾಸನ ಸ್ಪರ್ಧೆಯಿದೆ. ಆನಂತರ, ರೈತ ದಸರಾ ಮೆರವಣಿಗೆ, ಕವಿಗೋಷ್ಠಿ, ಕೃಷಿ ವಸ್ತು ಪ್ರದರ್ಶನ, ಮತ್ಸ್ಯ ಮೇಳ, ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿವೆ.
ಅ. 6ರಂದು ಏನೇನು ಕಾರ್ಯಕ್ರಮ?
ಅ. 6ರಂದು ಬೆಳಗ್ಗೆ 7 ಗಂಟೆಗೆ ಟೌನ್ ಹಾಲ್ ಮುಂಭಾಗದಲ್ಲಿ ಸಾಂಪ್ರದಾಯಿಕ ನಡಿಗೆ, ಆನಂತರ ಮಕ್ಕಳ ದಸರಾ ಕಾರ್ಯಕ್ರಮ, ಮುದ್ದು ಪ್ರಾಣಿಗಳ ಕಾರ್ಯಕ್ರಮ, ಬೆ. 10.30ಕ್ಕೆ ಸಮಾನತಾ ಗೋಷ್ಠಿ, ಸಂಜೆ 4.30ಕ್ಕೆ ಮುದ್ದು ಪ್ರಾಣಿಗಳ ಪ್ರದರ್ಶನದ ಬಹುಮಾನ ವಿತರಣೆ, ಸಂಜೆ 6 ಗಂಟೆಗೆ ಯುವದಸರಾ ಉದ್ಘಾಟನೆ, ರಾತ್ರಿ 8ಕ್ಕೆ ಡ್ರೋನ್ ಪ್ರದರ್ಶನವಿದೆ.
ಅ. 7ರಂದು ಏನೇನು?
ಅಕ್ಟೋಬರ್ 7ರಂದು ಬೆಳಗ್ಗೆ 6 ಗಂಟೆಗೆ ಯೋಗ ಸರಪಳಿ, ಆನಂತರ ಸಂತಸ ಕವಿಗೋಷ್ಠಿ, ಸಂಜೆ 5.30ಕ್ಕೆ ಹಾಲು ಕರೆಯುವ ಸ್ಪರ್ಧೆ. ಅ. 8ರಂದು ಬೆಳಗ್ಗೆ 10.30ಕ್ಕೆ ಸಮಷ್ಠಿ ಕವಿಗೋಷ್ಠಿ, ಸಂಜೆ 4ಕ್ಕೆ ದಸರಾ ಕಿರುಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅ. 9ರಂದು ಬೆಳಗ್ಗೆ 7 ಗಂಟೆಗೆ ಯೋಗ ಮತ್ತು ಚಾರಣ, ಬೆಳಗ್ಗೆ 10.30ಕ್ಕೆ ಸಮೃದ್ಧ ಕವಿಗೋಷ್ಠಿ ನಡೆಯಲಿದೆ.
ಅ.12ಕ್ಕೆ ವಿಜಯದಶಮಿ
ಅಕ್ಟೋಬರ್ 12 ರ ಶನಿವಾರ ವಿಜಯದಶಮಿಯ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಂದು ಬೆಳಿಗ್ಗೆ 9.45 ಕ್ಕೆ ಪಟ್ಟದ ಆನೆ, ಹಸು, ಕುದುರೆಗಳು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. 10.15 ಕ್ಕೆ ಉತ್ತರ ಪೂಜೆ ಆರಂಭವಾಗಲಿದೆ. 11.20 ರಿಂದ 11.45 ರ ಒಳಗೆ ವಿಜಯಯಾತ್ರೆ ಹಾಗೂ ದಶಮಿ ಪೂಜೆಯ ವಿಧಿಗಳು ನೆರವೇರಲಿವೆ.
ವಿಜಯಯಾತ್ರೆ ಮುಗಿದ ಬಳಿಕ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಮರಳಿಸಲಾಗುವುದು. ಅಕ್ಟೋಬರ್ 27 ರ ಭಾನುವಾರ ಬೆಳಿಗ್ಗೆ 10.10 ರಿಂದ 10.45 ರ ಒಳಗೆ ರತ್ನಖಚಿತ ಸಿಂಹಾಸನವನ್ನು ಬೇರ್ಪಡಿಸಿ ಭದ್ರತಾ ಖಜಾನೆಗೆ ಕೊಂಡೊಯ್ಯಲಾಗುತ್ತದೆ. ಆ ಮುಖಾಂತರ ರಾಜಮನೆತನದಿಂದ ಈ ಬಾರಿಯ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ವಿಧಿಗಳಿಗೂ ಅಂತಿಮ ತೆರೆ ಬೀಳಲಿದೆ.
ಅದ್ದೂರಿ ದಸರಾ ಸಂಭ್ರಮ
ಅರಮನೆ ವೇದಿಕೆಯಲ್ಲಿ ಅ. 7ರಿಂದ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಅ. 6ರಿಂದ 10ರವರೆಗೆ ಯುವ ದಸರಾ ಬಹಳ ಅದ್ದೂರಿಯಿಂದ ನಡೆಯಲಿದೆ. ಇದು ಮೈಸೂರಿನ ಹೊರವಲಯದಲ್ಲಿರುವ ಉತ್ತನಹಳ್ಳಿಯಲ್ಲಿ ಜರುಗಲಿದೆ. ಬಾಲಿವುಡ್ ನ ಗಾಯಕರಾದ ಶ್ರೇಯಾ ಘೋಷಲ್, ಬಾದ್ ಶಾ, ಸಿನಿಮಾ ಸಂಗೀತದ ದಂತಕಥೆಗಳಾದ ಇಳಯರಾಜಾ, ಎಆರ್ ರಹಮಾನ್ ಹಾಗೂ ಕೆಜಿಎಫ್ ನ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅ.12ಕ್ಕೆ ಜಂಬೂ ಸವಾರಿ ಶುರು
ಅ. 12ರ ಮಧ್ಯಾಹ್ನ 12.30ರ ಸುಮಾರಿಗೆ ನಂದಿ ಧ್ವಜ ಪೂಜೆ ನೆರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4.30ರಿಂದ 5 ಗಂಟೆಯವರೆಗಿನ ಮೀನಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಮನೆಯ ಮುಂಭಾಗದಲ್ಲಿ ಜಂಬೂ ಸವಾರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು.
ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ (ಜಂಬೂ ಸವಾರಿ)ಗೆ ಚಾಲನೆ ದೊರೆಯಲಿದೆ. ಸಂಜೆ 7ಕ್ಕೆ ಬನ್ನಿಮಂಟಪ ಆವರಣದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ಪಂಜಿನ ಕವಾಯತ್ ಅನ್ನು ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ನಾಡ ಹಬ್ಬ ದಸರಾ ನೋಡಲು ಈಗಾಗಲೇ ಸಾಕಷ್ಟು ಜನ ಪ್ರವಾಸಿಗರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದು , ವಿವಿಧ ರೀತಿಯ ದೀಪದ ಕಲಾ ಕೃತಿಗಳು , ಕಮಾನುಗಳು ಸ್ವಾಗತವನ್ನು ಕೋರುತ್ತಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಕೂಡ ದಸರಾ ಹಬ್ಬದ ಶುಭಾಶಯ ಕೋರುತ್ತ