ಗ್ರಾಪಂ ನೌಕರರ ಹೋರಾಟ ಜೋರು!
– ರಾಜ್ಯದ ಎಲ್ಲಾ ಕಡೆ ಗ್ರಾಮ ಪಂಚಾಯತ್ ಕೆಲಸ ಡೌನ್
– ಅ. 4ರಂದು ಪ್ರತಿಭಟನೆ: ಸರ್ಕಾರ ತಕ್ಷಣ ಬಗೆಹರಿಸಲು ಪಟ್ಟು
NAMMUR EXPRESS NEWS
ಬೆಂಗಳೂರು: ಸೇವಾ ಹಿರಿತನದ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರು ಅ.4 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಒಂದು ವಾರದಿಂದ ಹೋರಾಟ ನಡೆಯುತ್ತಿದ್ದು, ಜನರ ಕೆಲಸಕ್ಕೆ ಸಮಸ್ಯೆ ಆಗುತ್ತಿದೆ. ಸರ್ಕಾರ ತಕ್ಷಣ ಗಮನಿಸಲು ಜನ ಅಗ್ರಹಿಸಲಾಗಿದೆ.
ಇಲಾಖೆಯ ಐದು ವೃಂದದ ನೌಕರರ ಬೇಡಿಕೆ ಈಡೇರಿಕೆ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕರೆದ ಸಭೆಗೂ ನೌಕರರು ಗೈರಾಗುವ ಮೂಲಕ ಪ್ರತಿಭಟನೆ ನಿರ್ಧಾರ ಅಚಲ ಎಂಬ ಸಂದೇಶ ರವಾನಿಸಿದ್ದಾರೆ. ಕ್ಲರ್ಕ್ ಕಂ-ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರುಗಂಟಿ, ಜವಾನ ಮತ್ತು ಸ್ವಚ್ಛತಗಾರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಬದಲಾಗಿ ಇಲಾಖೆಯಿಂದ ವೇತನ ನಿಗದಿಪಡಿಸಿ ಹಾಗೂ ಸೇವಾ ಹಿರಿತನ ವೇತನ ಜಾರಿ ಮಾಡುವ ದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ 2024ರ ಫೆಬ್ರವರಿಯಲ್ಲಿ ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದೆ. ವರದಿ ಅನುಮೋದನೆಗೆ ಎಷ್ಟೇ ಒತ್ತಡ ತಂದರೂ ಪ್ರಯೋಜನವಾಗಿಲ್ಲ ಎಂದು ಸಂಘ ಹೇಳಿದೆ.
ಗ್ರಾಮ ಮಟ್ಟದಲ್ಲಿ ಕೆಲಸವೇ ಆಗುತ್ತಿಲ್ಲ!
ಗ್ರಾಮ ಪಂಚಾಯತ್ ಪಿಡಿಓಗಳು ಕೂಡ ಈಗಾಗಲೇ ಹೋರಾಟ ಮಾಡುತ್ತಿದ್ದು, ವಿಧವಾ ವೇತನ, ಜಾತಿ ದೃಡೀಕರಣ ಪತ್ರ, ಆದಾಯ ದೃಡೀಕರಣ ಪತ್ರ ಸೇರಿ ಎಲ್ಲಾ ದಾಖಲೆಗಳು ವಿಳಂಬವಾಗುತ್ತಿವೆ. ಇದರಿಂದ ಜನರಿಗೆ ಭಾರೀ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕಿದೆ