5 ದಿನ ರಾಜ್ಯದಲ್ಲಿ ಮತ್ತೆ ಭಾರಿ ಮಳೆ!
– ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ನಲುಗಿದ ಜನ
– ರಾತ್ರಿ ಮಳೆ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು
– ಮಲೆನಾಡು, ಕರಾವಳಿಯಲ್ಲಿ ಭೀಕರ ಮಳೆ
– ಮಲೆನಾಡಲ್ಲಿ ಅಡಿಕೆ, ಕಾಫಿ ಕಥೆ ಗೋವಿಂದ!
– ಉತ್ತರ ಕನ್ನಡ ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು
– ದಾವಣಗೆರೆಯಲ್ಲಿ ಮನೆ ಕುಸಿದು ಸಾವು
NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಇನ್ನೂ 5 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲೆಡೆ ಮಳೆಯ ವಾತಾವರಣ ಕಂಡು ಬರುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಚುರುಕಾಗಿದ್ದು, ಧಾರಾಕಾರ ಮಳೆ ಸುರಿದು ಜನ ತತ್ತರಿಸುವಂತೆ ಮಾಡಿದೆ. ಇದೀಗ ದಕ್ಷಿಣ ಕರ್ನಾಟಕ ಭಾಗದಲ್ಲಿಯೂ ಮಳೆ ಅಬ್ಬರ ಜೋರಾಗಿದೆ. ಮುಂದಿನ ಐದು ದಿನಗಳಿಂದ ಒಂದು ವಾರದವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು
ವಿಜಯನಗರ, ಕೊಡಗು, ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯಲಿದ್ದು, ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಳೆ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು: ರಾತ್ರಿ ಸುರಿದ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿವೆ 10 ಅಡಿ ಎತ್ತರದ ಗೋಡೆ ರಸ್ತೆಗೆ ಉರುಳಿ ಅವಾಂತರ ಸೃಷ್ಟಿಯಾಗಿದೆ. ಗೋಡೆ ಕುಸಿದಿದ್ದರಿಂದ 10ಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿದ್ದು ವಿದ್ಯುತ್ ಕಂಬದ ಮೇಲೆ ಗೋಡೆ ಬಿದ್ದ ಹಿನ್ನೆಲೆ ಕಂಬ ವಾಲಿದೆ. ಮನೆಯಿಂದ ಹೊರಬರಲಾಗದೇ ಸ್ಥಳೀಯರು ಪರದಾಡುತ್ತಿದ್ದಾರೆ.
ಉತ್ತರ ಕನ್ನಡ ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು!
ಕಾರವಾರ: ಸಮುದ್ರದ ಅಲೆಗೆ ಸಿಲುಕಿ ಪ್ರವಾಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಉತ್ತರಕನ್ನಡದ ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ಘಟನೆ ನಡೆದಿದೆ. ಗೌತಮ್ (17) ಮೃತ ದುರ್ದೈವಿ.
ಬೆಂಗಳೂರಿನ ವಿದ್ಯಾ ಸೌಧ ಪ್ರಥಮ ದರ್ಜೆ ಕಾಲೇಜಿನಲ್ಲಿ 220 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ಅಬ್ಬರಕ್ಕೆ ಗೌತಮ್ ಸಿಲುಕಿ ಮೃತಪಟ್ಟರೆ, ಇನ್ನೋರ್ವ ವಿದ್ಯಾರ್ಥಿ ಧನುಶ್ ಎಂಬಾತನನ್ನು ಲೈಫ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅಸ್ವಸ್ಥನಾಗಿದ್ದ ಧನುಶ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಮುದ್ರದ ಅಲೆಯಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮುರ್ಡೇಶ್ವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ದಾವಣಗೆರೆ : ಮನೆಯ ಗೋಡೆ ಕುಸಿದು ವೃದ್ಧ ಸಾವು
ದಾವಣಗೆರೆಯಲ್ಲಿ ಸತತ ಮಳೆಗೆ ಮನೆಯ ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ವಿಜಯನಗರದಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದೆ.
ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕುಳಗಟ್ಟೆ ಬಸವರಾಜಪ್ಪ (81) ಗೋಡೆ ಬಿದ್ದು ಮೃತಪಟ್ಟವರು. ದಾವಣಗೆರೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣಿ ಬೀದಿಯ ಮನೆಯ ಗೋಡೆ ಕುಸಿದಿದೆ. ರಾತ್ರಿ ಗೋಡೆ ಒಂದು ಕಡೆ ವಾಲುತ್ತಿದ್ದ ವೇಳೆ ಬಸವರಾಜಪ್ಪ ಅವರ ಮಗ-ಸೊಸೆ ಮನೆ ಹೊರಗೆ ಬಂದಿದ್ದಾರೆ. ಬಸವರಾಜಪ್ಪ ಹೊರ ಬರುವಷ್ಟರಲ್ಲೇ ಗೋಡೆ ಕುಸಿದಿದೆ.
ವಿಜಯನಗರ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಸುಮಾರು 49 ಮನೆಗಳಿಗೆ ಹಾನಿಯಾಗಿದೆ. ಆರು ತಾಲೂಕುಗಳ ಪೈಕಿ, ಕೂಡ್ಲಿಗಿ ತಾಲ್ಲೂಕಿನಲ್ಲಿ 42 ಮನೆ ಸೇರಿ ಜಿಲ್ಲೆಯಲ್ಲಿ 49 ಮನೆಗಳಿಗೆ ಹಾನಿಯಾಗಿದೆ. ಹೊಸಪೇಟೆಯಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ತಲಾ ಒಂದೊಂದು ಮನೆ, ಕೊಟ್ಟೂರು ತಾಲೂಕಿನಲ್ಲಿ 4 ಮನೆಗೆ ಹಾನಿಯಾಗಿದೆ. ಹಡಗಲಿ ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಎರಡು ಕುರಿಗಳು ಮೃತಪಟ್ಟಿವೆ.