ಇನ್ನು ಕಾಫಿ ಪುಡಿ ದುಬಾರಿ!
– ಕಾಫಿ ಬೆಲೆ ಹೆಚ್ಚಳ ಸಾಧ್ಯತೆ: ಏಕೆ ಬೆಲೆ ಏರಿಕೆ?
– ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ!
NAMMUR EXPRESS NEWS
ಬೆಂಗಳೂರು: ಹಾಲಿನ ಬೆಲೆ ಏರಿಕೆ ಜೊತೆಗೆ ಕಾಫಿ ಪುಡಿಬೆಲೆಯೂ ಹೆಚ್ಚಾಗುತ್ತಿದ್ದು, ಕಾಫಿ ಪ್ರಿಯರಿಗೆ ಕಹಿ ಅನುಭವವಾಗತೊಡಗಿದೆ. ಅ. 15ರಿಂದ ಪ್ರತೀ ಕೆಜಿ ಕಾಫಿ ಪುಡಿ ಮೇಲೆ 100 ರೂ. ದುಬಾರಿಯಾಗಲಿದೆ.
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಶನ್ (ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಕಾಫಿ ಪುಡಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳು ಹಾಗೂ ಕೆಫೆಗಳಲ್ಲಿಯೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಕಾಫಿ ಬೆಲೆ ಏರಿಕೆ ಏಕೆ?
ಹವಾಮಾನ ವೈಪರೀತ್ಯದಿಂದಾದಿ ಬೆಳೆ ಇಳಿಕೆಯಾಗಿದೆ. ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕವಾಗಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ವಿವಿಧ ಅಂಶಗಳಿಂದ ಅದರ ಉತ್ಪಾದನೆಯು ಕಡಿಮೆಯಾಗಿದೆ. ಭಾರತೀಯ ಕಾಫಿಗೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಯನ್ನು ಪೂರೈಸಬೇಕಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಫಿ ಬೀಜದ ಬೆಲೆ ಕೆಜಿಗೆ 200- 280 ರಿಂದ ಹೆಚ್ಚಾಗಿದೆ ಎಂದು ಐಸಿಟಿಎ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಅವರು ಹೇಳಿದ್ದಾರೆ.
ಐಸಿಟಿಎ ಪ್ರಕಾರ, ಭಾರತವು 3.5 ಲಕ್ಷ ಟನ್ಗಳಷ್ಟು ಕಾಫಿಯನ್ನು ಉತ್ಪಾದಿಸುತ್ತದೆ, ಈ ಪೈಕಿ ಶೇ.70ರಷ್ಟು ಬೆಳೆಯು ರೊಬಸ್ಟಾ ತಳಿಯಾಗಿದೆ. ಒಟ್ಟು ಉತ್ಪಾದನೆಯಲ್ಲಿ ಸುಮಾರು ಒಂದು ಲಕ್ಷ ಟನ್ ದೇಶೀಯವಾಗಿ ಬಳಕೆಯಾಗುತ್ತದೆ. ಜನವರಿಯಿಂದ ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ರೊಬಸ್ಟಾ ಕಾಫಿ ಬೆಲೆ ಕೆಜಿಗೆ 200 ರೂ.ನಿಂದ 420 ರೂ.ಗೆ ಮತ್ತು ಅರೇಬಿಕಾ ಕೆಜಿಗೆ 290 ರೂ.ನಿಂದ 465 ರೂ.ಗೆ ಏರಿಕೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಕಾಫಿ ಉತ್ಪಾದನೆಯಲ್ಲಿ ಶೇ.20ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ, ಕಾಫಿಯೊಂದಿಗೆ ಚಿಕೋರಿ ಮಿಶ್ರಣವನ್ನು ಶೇ.49ರಷ್ಟು ಮಿಶ್ರಣ ಮಾಡಬಹುದು. ಆದಾಗ್ಯೂ, ವ್ಯಾಪಾರಿಗಳು ಕಾಫಿಯ ಸುವಾಸನೆ ಮತ್ತು ವಿನ್ಯಾಸವನ್ನು ಕಡಿಮೆ ಮಾಡುವುದರಿಂದ ಶೇ.20ಕ್ಕಿಂತ ಹೆಚ್ಚು ಚಿಕೋರಿಯನ್ನು ಮಿಶ್ರಣ ಮಾಡುವುದಿಲ್ಲ. ಆದರೆ, ಇದೀಗ ಕಾಫಿ ಬೆಲೆ ಏರಿಕೆಯಿಂದ ಚಿಕೋರಿ ಮಿಶ್ರಣವೂ ಹೆಚ್ಚಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ನಿಗಾ ವಹಿಸುವುದು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 300 ನೋಂದಾಯಿತ ಕಾಫಿ ರೋಸ್ಟರ್ಗಳು ಮತ್ತು ದಕ್ಷಿಣ ಭಾರತದಲ್ಲಿ ಸುಮಾರು 500 ಕಾಫಿ ರೋಸ್ಟರ್ಗಳಿದ್ದಾರೆ. ಅಲ್ಲದೆ, 3,000 ನೋಂದಾಯಿತ ಕಾಫಿ ವ್ಯಾಪಾರ ಘಟಕಗಳಿವೆ.
ಕಾಫಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೋಂದಣಿಯಾಗದ ಘಟಕಗಳು ಹಾಗೂ ಗುಣಮಟ್ಟವಿಲ್ಲದ ಕಾಫಿ ಮಾರಾಟ ಮಾಡುವವರಿಗೆ ಐಸಿಟಿಎ ಕಠಿಣ ಎಚ್ಚರಿಕೆ ನೀಡಿದೆ.