ಟಾಪ್ 3 ನ್ಯೂಸ್ ಕರ್ನಾಟಕ
– ಓಣಂ ಬಂಪರ್, 25 ಕೋಟಿ ಗೆದ್ದ ಕನ್ನಡಿಗ!
– ಅದೃಷ್ಟ ಖುಲಾಯಿಸಿ ರಾತ್ರೋರಾತ್ರಿ ಕೋಟ್ಯಧಿಪತಿ ಆದ ಮೆಕಾನಿಕ್!
– ಇತಿಹಾಸದಲ್ಲೇ 400 ರೂ.ಗಡಿ ದಾಟಿದ ಗುಲಾಬಿ!
– ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿಗೆ ಗಂಡು ಮಗು ಜನ್ಮ
NAMMUR EXPRESS NEWS
ಮಂಡ್ಯ: ಲಕ್ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಮಂಡ್ಯದ ಮೆಕ್ಯಾನಿಕ್ ಒಬ್ಬರಿಗೆ ಇದೀಗ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.
ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಈ ವೇಳೆ ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಅಲ್ತಾಫ್ ಪಾಷಾ 25 ಕೋಟಿ ರೂ. ಗೆದ್ದಿದ್ದಾರೆ.
ತಾನು ಖರೀದಿ ಮಾಡಿದ ಲಾಟರಿ ಟಿಕೆಟ್ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ಹೋಗಿದ್ದಾರೆ.
* ಇತಿಹಾಸದಲ್ಲೇ 400ರ ಗಡಿ ದಾಟಿದ ಗುಲಾಬಿ!
ನವರಾತ್ರಿ ದಸರಾ ಹಬ್ಬ ರೈತರ ಪಾಲಿಗೆ ಬಂಪರ್ ಲಾಭ ತಂದಿದೆ. ತಿಪ್ಪೆಗೆ ಬಿಸಾಡುತ್ತಿದ್ದ ಹೂಗಳಿಗೆ ಚಿನ್ನದ ಬೆಲೆ ಬಂದಿದ್ದು, ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆಗೆ ಗುಲಾಬಿ ಹೂ ಮಾರಾಟವಾಗಿದೆ. ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದ್ರಿಂದ ಹೂಗಳ ಬೆಲೆ ಗಗನಕ್ಕೇರಿದ್ದು ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 1 ಕೆಜಿ ಗುಲಾಬಿ ಹೂವಿನ ಬೆಲೆ 400 ರಿಂದ 500 ರೂ. ವರೆಗೂ ಮಾರಾಟವಾಗಿದೆ.
ಇನ್ನೂ ತರಹೇವಾರಿ ಸೇವಂತಿಗೆ ಹೂಗಳು ಕೆಜಿಗೆ 250 ರಿಂದ 350 ರೂಪಾಯಿಯವರೆಗೂ ಮಾರಾಟವಾಗುತ್ತಿವೆ. ಅದ್ರಲ್ಲೂ ಕೆಜಿ ಕನಕಾಂಬರ 1,000 ರೂಪಾಯಿಯಿಂದ 1,200 ರೂ. ವರೆಗೆ ಮಾರಾಟವಾಗುತ್ತಿದ್ರೆ ಮಲ್ಲಿಗೆ ಹೂ 1 ಕೆಜಿಗೆ 1,000 ರೂಪಾಯಿಯಾಗಿದೆ. ಇದ್ರಿಂದ ಹೂ ಬೆಳೆದ ರೈತರಿಗೆ ಸಂತಸವೋ ಸಂತಸ ಎಂಬಂತಾಗಿದೆ.
ಇನ್ನೂ ಹೋಲ್ ಸೇಲ್ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲೂ ಒನ್ ಟು ಡಬಲ್ ಆಗಿದ್ದು ರೈತರಿಗೆ ಲಾಭ ಗ್ರಾಹಕರಿಗೆ ಜೇಬಿಗೆ ಕತ್ತರಿ ಎಂಬಂತಾಗಿದೆ.
ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿಗೆ ಗಂಡು ಮಗು ಜನ್ಮ
ದಸರಾ ಹಬ್ಬಕ್ಕೆ ಮೈಸೂರು ಅರಮನೆ ಮನೆತನದಲ್ಲಿ ಇನ್ನಷ್ಟು ಸಂಭ್ರಮ ಮೂಡಿದೆ. ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಮೈಸೂರು ಅರಮನೆ ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಇದು ನವರಾತ್ರಿ ಸಂಭ್ರಮದಲ್ಲಿ ರಾಜಮನೆತನದ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಆರೋಗ್ಯವಾಗಿದ್ದಾರೆ.
ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಶುಭಸುದ್ದಿ ಸಿಕ್ಕಿದೆ. ದಸರಾ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಅರಮನೆಯಲ್ಲಿ ಸಂಭ್ರಮ ಹೆಚ್ಚಿದೆ. ಈ ಬೆನ್ನಲ್ಲೇ ಇದೀಗ 2ನೇ ಮಗು ಜನನ ಆಗಿರುವುದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಡಬಲ್ ಖುಷಿ ಸಿಕ್ಕಂತೆ ಆಗಿದೆ. ಇದೇ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಿಂದ ಗೆದ್ದು ಸಂಸದರಾಗಿದ್ದಾರೆ. ಒಟ್ಟಿನಲ್ಲಿ 2024 ರಾಜವಂಶಸ್ಥ ಯದುವೀರ್ಗೆ ಮೇಲಿಂದ ಮೇಲೆ ಖುಷಿಯ ಸುದ್ದಿ ಸಿಕ್ಕಿದೆ.