ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆ
– ದಶಕಗಳ ಕನಸು ಇದೀಗ ನನಸು
– ಭಾರತೀಯ ರೈಲ್ವೆ ಇಲಾಖೆ ತಿರುಪತಿಗೆ ನೇರ ರೈಲು ಸೇವೆ ಆರಂಭಿಸಲು ಒಪ್ಪಿಗೆ
NAMMUR EXPRESS NEWS
ಕುಂದಾಪುರ: ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಸಮ್ಮತಿ ಸೂಚಿಸಿದೆ. ತಿರುಪತಿ ಮತ್ತು ಉಡುಪಿ-ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ. ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ-ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. ಮುರುಡೇಶ್ವರದ ಮೂಲಕ ಕುಂದಾಪುರ, ಉಡುಪಿ, ಸುರತ್ಕಲ್, ಮೂಲ್ಕಿ ನಗರಗಳು, ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್ವರೆಗೆ ರೈಲು ಸಂಪರ್ಕ ದೊರಕಿದಂತಾಗಿದೆ.
ಈ ರೈಲು ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು, ಕುಂದಾಪುರಕ್ಕೆ ಸಂಜೆ 4.40ಕ್ಕೆ, ಮಂಗಳೂರಿಗೆ ರಾತ್ರಿ 8ಕ್ಕೆ, ತಿರುಪತಿ ಬಳಿಯ ರೇಣಿಗುಂಟಕ್ಕೆ ಮರುದಿನ 11.45 ಹಾಗೂ ಹೈದರಾಬಾದಿನ ಕಾಚಿಗುಡ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳಿಗ್ಗೆ 6ಕ್ಕೆ ಹೊರಡಲಿದ್ದು, ರೇಣಿಗುಂಟಕ್ಕೆ ಸಂಜೆ 5ಕ್ಕೆ, ಮಂಗಳೂರಿಗೆ ಮರುದಿನ ಬೆಳಿಗ್ಗೆ 9.30ಕ್ಕೆ, ಕುಂದಾಪುರಕ್ಕೆ 11.59ಕ್ಕೆ ಹಾಗೂ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.