ಕರಾವಳಿ ನ್ಯೂಸ್
– ನಿಯಂತ್ರಣ ತಪ್ಪಿ ಉರುಳಿದ ಕಾರ್, ಮಹಿಳೆ ಸಾವು!
– ಭಾರಿ ಮಳೆ,ರಸ್ತೆ ಹಾಗೂ ಮನೆಯ ಹಿಂಭಾಗ ಗುಡ್ಡ ಕುಸಿತ!
– ಬಸ್ ಚಾಲನೆ ವೇಳೆ, ಎದೆ ನೋವು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು!
– ಸ್ಕೂಲ್ ಬಸ್ ಚಾಲನೆ ವೇಳೆ ಮೂರ್ಚೆ ರೋಗ,ವಿದ್ಯುತ್ ಕಂಬಕ್ಕೆ ಡಿಕ್ಕಿ!
NAMMUR EXPRESS NEWS
ಪುಂಜಾಲಕಟ್ಟೆ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬದಿಯ ತೋಟವೊಂದಕ್ಕೆ ಬಿದ್ದ ಘಟನೆ ಬಿ.ಸಿ.ರೋಡು-ಬೆಳ್ತಂಗಡಿ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಅ. 14ರಂದು ಮುಂಜಾನೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್ಬೈಲ್ ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರೂಪೇಶ್ (40) ಎಂಬವರಿಗೆ ಗಂಭೀರ ಗಾಯಗಳಾಗಿವೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೂಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಕಾರು ಮುಂಜಾನೆ ಸುಮಾರು 4.30ರ ಸುಮಾರಿಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದೆ.
ಭಾರಿ ಮಳೆ,ರಸ್ತೆ ಹಾಗೂ ಮನೆಯ ಹಿಂಭಾಗ ಗುಡ್ಡ ಕುಸಿತ!
ಬೆಳ್ತಂಗಡಿ: ಅ. 13ರಂದು ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮುಂಡಾಜೆಯಲ್ಲಿ ಗುಡ್ಡ ಕುಸಿದು ರಸ್ತೆ ಹಾಗೂ ಮನೆಯ ಮೇಲೆ ಬಿದ್ದ ಘಟನೆ ನಡೆದಿದೆ. ಗುಡ್ಡ ಕುಸಿತದಿಂದ ರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರಕ್ಕೆ ಅಡ್ಡಿಯಾಗುವ ರೀತಿ ರಸ್ತೆ ಮುಚ್ಚಲ್ಪಟ್ಟಿದೆ. ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬವರ ಮನೆಯ ಸಮೀಪ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿದಿದೆ. ರಸ್ತೆಗೆ ಹಾಗೂ ಮನೆಯ ಹಿಂಭಾಗದಲ್ಲಿ ಮಣ್ಣು ಬಿದ್ದಿದೆ. ಸ್ಥಳೀಯರು ಮಣ್ಣು ತೆರವು ಕಾರ್ಯ ಆರಂಭಿಸಿದ್ದಾರೆ.
ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು!
ಅರಂತೋಡು: ಸುಳ್ಯ ತೊಡಿಕಾನ ಖಾಸಗಿ ಅವಿನಾಶ್ ಬಸ್ ನಲ್ಲಿ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಅ.14 ವರದಿಯಾಗಿದೆ.ಗುರು ಪ್ರಸಾದ್ ಕುಂಚಡ್ಕ(30 ವರ್ಷ) ಮೃತ ದುರ್ದೈವಿಯಾಗಿದ್ದಾರೆ.
ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಆಟೋ ರಿಕ್ಷಾದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಕೂಲ್ ಬಸ್ ಚಾಲನೆ ವೇಳೆ ಮೂರ್ಚೆ ರೋಗ,ವಿದ್ಯುತ್ ಕಂಬಕ್ಕೆ ಡಿಕ್ಕಿ!
ಬಂಟ್ವಾಳ: ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಅ.14 ಬೆಳಿಗ್ಗೆ ನಡೆದಿದೆ. ಬಡಕಬೈಲು ಸೈಂಟ್ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ.