ಎಚ್ಚರ… ಎಚ್ಚರ: 5 ದಿನ ಭಾರೀ ಮಳೆ!
– ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್
– ಬೆಂಗಳೂರು, ಕರಾವಳಿ, ಮಲೆನಾಡು ಸೇರಿ ಎಲ್ಲೆಡೆ ಮಳೆ
NAMMUR EXPRESS NEWS
ಬೆಂಗಳೂರು: ಅಯ್ಯೋ ಮಳೆ ಮಳೆ. ಎಲ್ಲೆಡೆ ಮಳೆ ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಎಲ್ಲೆಡೆ ಮಳೆ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ ಇದ್ದರೆ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ಹೆಚ್ಚಾಗಿದೆ.
ಮಲೆನಾಡು, ಕರಾವಳಿ ಭಾಗದಲ್ಲಿ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಇನ್ನೆರಡು ದಿನಗಳಲ್ಲಿ ಕರ್ನಾಟಕದಿಂದ ಹಿಂದೆ ಸರಿಯಲಿದ್ದು, ದಕ್ಷಿಣ ಒಳ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಆರಂಭಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಶಾನ್ಯ ಮುಂಗಾರು ಪ್ರಾರಂಭವಾಗುವುದರೊಂದಿಗೆ, ಅಕ್ಟೋಬರ್ 16 ಮತ್ತು 17ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಒಂಬತ್ತು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಜೊತೆಗೆ, ವ್ಯಾಪಕವಾದ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ, ಹಾಸನ ಮತ್ತು ಕೊಡಗು. ಅಕ್ಟೋಬರ್ 14 ರಿಂದ 18ರವರೆಗೆ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಪ್ರತ್ಯೇಕ ಭಾರೀ ಮಳೆಯ ನಿರೀಕ್ಷೆಯಿದ್ದರೆ, ರಾಜ್ಯದ ಹಲವೆಡೆ ವ್ಯಾಪಕವಾದ ಭಾರೀ ಮಳೆಯಾಗುವ ನಿರೀಕ್ಷೆಯಿದೆ, ನಂತರ ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ.