ದೋಸೆ ಪ್ರಿಯರಿಗೆ ಗುಡ್ ನ್ಯೂಸ್: ಶೀಘ್ರದಲ್ಲಿ ನಂದಿನಿ ದೋಸೆ ಹಿಟ್ಟು!
– ಕೆಎಂಎಫ್ ನಂದಿನಿ ಬ್ಯಾಂಡ್ ದೋಸೆ ಹಿಟ್ಟು ಶೀಘ್ರ ಬಿಡುಗಡೆ
– 1, 2 ಕೇಜಿ ಪ್ರಮಾಣದ ಪ್ಯಾಕೇಟ್ ಬಿಡುಗಡೆಗೆ ಸಿದ್ಧತೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಯೊಂದಿಗೆ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಗೆ ನಂದಿನಿ ಬ್ರಾಂಡ್ನಡಿ ‘ದೋಸೆ ಹಿಟ್ಟು’ ಪರಿಚಯಿಸಲು ಮುಂದಾಗಿದೆ. ಕೆಎಂಎಫ್, ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ. ‘ರೆಡಿ ಟು ಕುಕ್’ ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಉತ್ಪಾದಿಸಲಿದೆ. ಪ್ರಾಯೋಗಿಕವಾಗಿ ಒಂದು ಮತ್ತು ಎರಡು ಕೆ.ಜಿ. ಪ್ರಮಾಣದ ದೋಸೆ ಹಿಟ್ಟಿನ ಪ್ಯಾಕೆಟ್ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ನಂದಿನಿ ಬ್ಯಾಂಡ್ ದೋಸೆ ಹಿಟ್ಟು ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಕೆಎಂಎಫ್ ಹೊಂದಿದೆ. ಪ್ರಸ್ತುತ ನಂದಿನಿ ಬ್ಯಾಂಡ್ನಡಿ ಹಾಲು, ಮೊಸರು, ಮಜ್ಜಿಗೆ, ಐಸ್ಕ್ರೀಂ, ಸಿಹಿ ಉತ್ಪನ್ನಗಳು, ತುಪ್ಪ, ಬೆಣ್ಣೆ, ಹಾಲಿನ ಪುಡಿ ಹೀಗೆ ಸುಮಾರು 156ಕ್ಕೂ ಹೆಚ್ಚು ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸಲಾಗುತ್ತಿದೆ.