ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ
-ತೀರ್ಥಹಳ್ಳಿಯಲ್ಲಿ ಬೈಕ್ ಪಿಕಪ್ ಡಿಕ್ಕಿ: ಯುವಕ ಸಾವು!
– ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸಿಟಿ ಬಸ್!
– ರಿಪ್ಪನ್ಪೇಟೆ : ಕಾರು ಬೊಲೆರೋ ಮುಖಾಮುಖಿ ಡಿಕ್ಕಿ, ಮೂವರಿಗೆ ಗಾಯ
– ಸಾಗರ: ಕೋರ್ಟ್ ಆವರಣದ ಬಳಿ ವಿಷ ಸೇವಿಸಿದ ವ್ಯಕ್ತಿ
– ಆಯನೂರು: ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಮಾಯ!
– ಶಿವಮೊಗ್ಗ : ಜೈಲಿನಿಂದ ಕರೆ ಮಾಡಿ ಪತ್ನಿಗೆ ಬೆದರಿಕೆ ಒಡ್ಡಿದ ಖೈದಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮೇಲಿನ ಕುರುವಳ್ಳಿಯ ಸೋಮೇಶ್ವರ ತಿರುವಿನಲ್ಲಿ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವ್ಯಕ್ತಿ ಮೇಲಿನ ಕುರುವಳ್ಳಿ ವಾಸಿ ಕಾರ್ತಿಕೇಯ(34) ಎಂದು ಗುರುತಿಸಲಾಗಿದ್ದು, ರಸ್ತೆಯ ತಿರುವಿನಲ್ಲಿ ಪಿಕಪ್ ಗೆ ಬೈಕ್ ಡಿಕ್ಕಿ ಹೊಡೆದಾಗ ಬೈಕ್ ಹಿಂಬದಿ ಸವಾರ ಕಾರ್ತಿಕೇಯ ಕೆಳಗೆ ಬಿದ್ದಾಗ ಪಿಕಪ್ ಎದೆಯ ಮೇಲೆ ಹರಿದಿದೆ, ಗಂಭೀರವಾಗಿ ಗಾಯಗೊಂಡ ಈತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸಿಟಿ ಬಸ್!
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಸಿಟಿ ಬಸ್ ಚರಂಡಿಗೆ ಪಲ್ಟಿಯಾಗಿದೆ. ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಳಿ ಬೆಳಿಗ್ಗೆ ಘಟನೆ ನಡೆದಿದ್ದು, ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 20 ಜನರು ಪ್ರಯಾಣಿಸುತಿದ್ದರು. ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಸರ್ಜಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ರಿಪ್ಪನ್ಪೇಟೆ : ಮೂವರಿಗೆ ಗಂಭೀರ ಗಾಯ
ರಿಪ್ಪನ್ಪೇಟೆ : ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬುಕ್ಕಿವರೆ ಗ್ರಾಮದ ಬಳಿಯಲ್ಲಿ ಕಾರು ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬುಕ್ಕಿವರೆ ಸಮೀಪ ತಿರುವಿನಲ್ಲಿ ಶಿವಮೊಗ್ಗ ಮೂಲದ ಕುಟುಂಬದವರು ಪ್ರಯಾಣಿಸುತಿದ್ದ ಕಾರು ಹಾಗೂ ಬೊಲೆರೋ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಈ ಘಟನೆಯಲ್ಲಿ ಕಾರಿನ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಅಪಘಾತ ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಕೋಣಂದೂರು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
– ಸಾಗರ: ಕೋರ್ಟ್ ಆವರಣದ ಬಳಿ ವಿಷ ಸೇವಿಸಿದ ವ್ಯಕ್ತಿ
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯಲ್ಲಿರುವ ಕೋರ್ಟ್ ಆವರಣದ ಸಮೀಪ ವ್ಯಕ್ತಿಯೊಬ್ಬರು ವಿಷ ಸೇವಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಕೋರ್ಟ್ ಆವರಣದ ಬಳಿಯಲ್ಲಿ ವೀರಭದ್ರಪ್ಪ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್ನಲ್ಲಿದ್ದು ಅದೇ ವಿಚಾರಕ್ಕೆ ಮನನೊಂದು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
– ಆಯನೂರು: ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಮಾಯ
ಆಯನೂರು: ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಕಳುವಾಗಿದೆ. ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ. ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಅವರು ಟ್ರಾಕ್ಟರ್ಗೆ ಪೂಜೆ ಸಲ್ಲಿಸಿ ದೇಗುಲದ ಮುಂದೆಯೇ ಟ್ರಾಕ್ಟರ್ ಅನ್ನು ರಾತ್ರಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಿದ ಪಾಲಾಕ್ಷಪ್ಪ ಅವರು ಬಳಿಕ ದೂರು ನೀಡಿದ್ದಾರೆ. ಟ್ರಾಕ್ಟರ್ ಮತ್ತು ಟ್ರಾಲಿ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪಕರಣ ದಾಖಲಾಗಿದೆ.
– ಶಿವಮೊಗ್ಗ : ಜೈಲಿನಿಂದ ಕರೆ ಮಾಡಿ ಪತ್ನಿಗೆ ಬೆದರಿಕೆ ಒಡ್ಡಿದ ಖೈದಿ
ಶಿವಮೊಗ್ಗ : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದಾನೆ. ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಖೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2024ರ ಮಾರ್ಚ್ ತಿಂಗಳಿಂದ ಹಲವು ಭಾರಿ ಕರೆ ಮಾಡಿ ಒಂದು ಸಾವಿರ, ಎರಡು ಸಾವಿರದಂತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದಾನೆ. ಹಣ ಹಾಕದಿದ್ದಲ್ಲಿ ಜೈಲಿನಿಂದ ಹೊರ ಬಂದ ನಂತರ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಆತನ ಪತ್ನಿ ದೂರು ನೀಡಿದ್ದಾಳೆ. ಬೆಂಗಳೂರು ಜೈಲಿನಲ್ಲಿ ನಟ ದರ್ಶನ್ಗೆ ರಾಜಾಥಿತ್ಯ ಆರೋಪದ ಬೆನ್ನಿಗೆ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮೊಬೈಲ್ ಚಾರ್ಜರ್ಗಳು ಲಭ್ಯವಾಗಿದ್ದವು ಎಂದು ಪ್ರಕರಣ ದಾಖಲಾಗಿತ್ತು.